ಜಗಳೂರು: ಬಡ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣವು ಶಕ್ತಿಶಾಲಿ ಅಸ್ತ್ರವಾಗಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಗುರುತಿಸಿ ಉಚಿತವಾಗಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಸಣ್ಣ ಸೂರಯ್ಯ ಹೇಳಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರೆಸೋನಿಯಾ ಎಚ್ಪಿಟಿಎಲ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಶೈಕ್ಷಣಿಕ ಅನುಕೂಲಕ್ಕಾಗಿ ಬ್ಯಾಗ್, ಪೆನ್, ಪುಸ್ತಕ ಸೇರಿ ವಿವಿಧ ಸಾಮಗ್ರಿಗಳನ್ನು ವಿತರಿಸಲಾಗಿದೆ. ನಮ್ಮ ತಾಲೂಕಿನಲ್ಲಿ ಇಂತಹ ಅನೇಕ ಶಾಲೆಗಳಿದ್ದು, ಸಂಸ್ಥೆಯು ಇನ್ನು ಹೆಚ್ಚಿನ ಶಾಲೆಗಳಿಗೆ ನೆರವಿನ ಹಸ್ತ ಚಾಚಲಿ ಎಂದು ಆಶಯ ವ್ಯಕ್ತಪಡಿಸಿದರು. ತಾಲೂಕಿನ ಕಲ್ಲೇದೇವರಪುರ, ಗೌರಮ್ಮನಹಳ್ಳಿ ಹಾಗೂ ಸಂಗೇನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಸಾಮಗ್ರಿಗಳನ್ನು ವಿತರಿಸಲಾಯಿತು.
ರೆಸೋನಿಯಾ ಎಚ್ಪಿಟಿಎಲ್ ಸಾಮಾಜಿಕ ಜವಾಬ್ದಾರಿ ನಿಧಿಯ ವ್ಯವಸ್ಥಾಪಕಿ ಮಾರಿಯಾ ಜೆನಿಫರ್, ಪ್ರಾಜೆಕ್ಟೃ್ ವ್ಯವಸ್ಥಾಪಕ ತಮಿಳ್ ವೆಲೆನ್, ರಾಜು, ಗ್ರಾಮದ ಮುಖಂಡರಾದ ಶರಣಪ್ಪ, ತಿಪ್ಪೇಸ್ವಾಮಿ, ಶಿಕ್ಷಕರಾದ ಸತ್ಯನಾರಾಯಣ ರೆಡ್ಡಿ, ಭಾರತ್ ಮಾತಾ, ಶಶಿಕಲಾ ಯಾದವ್, ಶಿಲ್ಪಾ, ವಿಶಾಲಮ್ಮ, ಉಮೇರಾ ಇತರರಿದ್ದರು.
ಶಿಕ್ಷಣವು ಮಕ್ಕಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದರಿಂದ ಕುಟುಂಬಗಳು ಬಡತನದಿಂದ ಹೊರಬರಲು ಸಾಧ್ಯ. ಜ್ಞಾನವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕಲು ದಾರಿ ಮಾಡಿಕೊಡುತ್ತದೆ. ಅಕ್ಷರಸ್ಥರಾದಾಗ ಯಾರೂ ಸುಲಭವಾಗಿ ವಂಚಿಸಲು ಅಥವಾ ಶೋಷಿಸಲು ಸಾಧ್ಯವಿಲ್ಲ ಎಂದು ಮುಖ್ಯಶಿಕ್ಷಕ ಎಚ್.ಟಿ. ಮಲ್ಲಿಕಾರ್ಜುನ್ ಹೇಳಿದರು.