ಚನ್ನಗಿರಿಯಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರ ಮಹಿಳೆಯರಿಗೆ ಆಯೋಜಿಸಿದ್ದ ಇಲಾಖೆಗಳ ಅಧ್ಯಯನ ಪ್ರವಾಸದಲ್ಲಿ ಎನ್.ಐ. ಸವಿತಾ ನರಸಿಂಹ, ಗಂಗಾಧರ್, ಹಾಲಮ್ಮ, ದೀಪಾ, ಸುನಿತಾ, ಸುವರ್ಣ, ರೂಪಾ ಇದ್ದರು. Women empowerment 
ದಾವಣಗೆರೆ

ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೊಂದೇ ಮಾರ್ಗ

ಪ್ರಮುಖ ಮುಖ್ಯಾಂಶಗಳು

  • ಸಮನ್ವಯಾಧಿಕಾರಿ ಎನ್.ಐ. ಸವಿತಾ ನರಸಿಂಹ ಹೇಳಿಕೆ
  • ಅಧ್ಯಯನ ಪ್ರವಾಸ
ಚನ್ನಗಿರಿ: ಮಹಿಳೆಯರು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತ ವಾಗಿದ್ದ ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನ ಬುದ್ಧಿವಂತಿಕೆ, ಧೈರ್ಯ ಹಾಗೂ ಪ್ರಾಮಾಣಿಕತೆಯಿಂದ ಪುರುಷರಿಗೆ ಸಮನಾಗಿ ಗುರುತಿಸಿ ಕೊಳ್ಳುತ್ತಿದ್ದಾಳೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಎನ್.ಐ. ಸವಿತಾ ನರಸಿಂಹ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗಾಗಿ ಸ್ವಉದ್ಯೋಗ, ಧಾರ್ಮಿಕ ಕ್ಷೇತ್ರ ಮತ್ತು ಸರ್ಕಾರಿ ಇಲಾಖೆಗಳ ಪರಿಚಯ ಹಾಗೂ ಉಪಯೋಗದ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಅಧ್ಯಯನ ಪ್ರವಾಸದ ಅಂಗವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಮಹಿಳೆಯರು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅತ್ಯಗತ್ಯ. ಹೇಮಾವತಿ ಅಮ್ಮನವರ ಕನಸಿನ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತಾಯಂದಿರು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ. ಪಾಲಕರು ಹೆಣ್ಣು-ಗಂಡು ಎಂಬ ಭೇದಭಾವ ಮಾಡದೆ ಸಮಾನ ಶಿಕ್ಷಣ ಹಾಗೂ ಸೌಕರ್ಯ ನೀಡಬೇಕು ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿ ಗಂಗಾಧರ್ ಮಾತನಾಡಿ, ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ಶೇ. 33 ರಷ್ಟು ಮೀಸಲಾತಿ ನೀಡಿದ್ದು, ಇದರ ಪ್ರಯೋಜನ ಪಡೆಯಬೇಕು. ಪ್ರತಿ ಕುಟುಂಬದಲ್ಲೂ ಪುರುಷರು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಬೇಕು. ಹೆಣ್ಣು ಇಲ್ಲದ ಮನೆಯಲ್ಲಿ ಸಂಸ್ಕಾರವಂತ ಮಕ್ಕಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಅಧ್ಯಯನ ಪ್ರವಾಸದ ಭಾಗವಾಗಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ನ್ಯಾಯಾಲಯ, ಅಗ್ನಿಶಾಮಕ ದಳ ಕಚೇರಿ, ಗಾಣದಕಟ್ಟೆ ಗ್ರಾಮದ ಸ್ವಉದ್ಯೋಗ ಕೇಂದ್ರ ಹಾಗೂ ಪ್ರಮುಖ ದೇವಸ್ಥಾನಗಳ ಪರಿಚಯ ಮಾಡಿಕೊಡಲಾಯಿತು. ಮಹಿಳಾ ಪೊಲೀಸ್ ಹಾಲಮ್ಮ, ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಸೋಮಶೆಟ್ಟಿಹಳ್ಳಿ ದೀಪ, ಅರಶಿನಘಟ್ಟ ಸುನಿತಾ, ಹೊಸ ಬಡಾವಣೆ ಸುವರ್ಣ, ಗಾಳಿಹಳ್ಳಿ ರೂಪಾ ಇದ್ದರು.