ಜಗಳೂರು ಪಟ್ಟಣದ ಜೆಎಂ ಇಮಾಂ ಸ್ಮಾರಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳ್ಳಿ ಹಬ್ಬ ಜೆ.ಎಂ. ಇಮಾಂ ಸ್ಮಾರಕ 7ನೇ ವರ್ಷದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿರಿಗೆರೆ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಪಿ. ರಾಜೇಶ್ ಇದ್ದರು.Award presentation
- ತರಳಬಾಳು ಸ್ವಾಮೀಜಿ ಹೇಳಿಕೆ
- ವೈಎಸ್‌ವಿ ದತ್ತಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ
ಜಗಳೂರು: ಸರಿ- ತಪ್ಪು ವಿವೇಚನೆ ಮಾಡುವ ಬುದ್ಧಿ ಬೆಳೆಸುವುದೇ ನಿಜವಾದ ಶಿಕ್ಷಣ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜೆಎಂ ಇಮಾಂ ಸ್ಮಾರಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳ್ಳಿ ಹಬ್ಬ ಜೆ.ಎಂ. ಇಮಾಂ ಸ್ಮಾರಕ 7ನೇ ವರ್ಷದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವಾಗಲೂ ಜೇಬಿನಲ್ಲಿ ಪೆನ್ನು, ಬಿಳಿ ಹಾಳೆ ಇಟ್ಟು ಕೊಂಡಿರಬೇಕು. ಯಾವುದೇ ವಿಚಾರ ನೆನಪಿಗೆ ಬಂದಾಗ ಕೂಡಲೇ ಬರೆದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನ ಬೆಳೆಯುತ್ತದೆ. ಆದರೆ ಈಗಿನ ಯುವ ಪೀಳಿಗೆಯ ಕೈಯಲ್ಲಿ ಮೊಬೈಲ್ ಇರುತ್ತದೆ. ಇದರಿಂದ ಲೇಖನಿಯ ಮೇಲೆ ಆಸಕ್ತಿ ಇರುವುದಿಲ್ಲ. ಲೇಖನಿ ಹಿಡಿಯದಿದ್ದರೆ ಬುದ್ಧಿ ಬೆಳೆಯುವುದಿಲ್ಲ. ಇದು ಬದಲಾಗಬೇಕು ಎಂದು ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿದರು.
ತುಪ್ಪದಹಳ್ಳಿ ಕೆರೆ ನಿರ್ಮಾಣ ಇಮಾಂ ಸಾಬ್ ಅವರ ಕೊಡುಗೆಯಾಗಿದೆ. ಅವರ ಸೇವೆಯನ್ನು ಸ್ಮರಣೆ ಮಾಡಿಕೊಳ್ಳಬೇಕು. ಇಮಾಂ ಸಾಬ್ ಆಂಗ್ಲ ಭಾಷೆಯಲ್ಲಿ ಬರೆದಿರುವ ಪುಸ್ತಕ ಉತ್ತಮವಾಗಿದ್ದು, ಆದಷ್ಟು ಬೇಗ ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವನ್ನು ಮುದ್ರಿಸಲಾಗುವುದು ಎಂದರು.
ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಇಮಾಂ ಸಾಬ್ ಹೆಸರಿನ ಪ್ರಶಸ್ತಿಗೆ ಶಾಲಾ ಆಡಳಿತ ಮಂಡಳಿ ನನ್ನನ್ನು ಗುರುತಿಸಿದ್ದಕ್ಕೆ ಅಭಿನಂದಿಸುತ್ತೇನೆ. ಇಮಾಂ ಅವರು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಎರಡನ್ನು ನೋಡಿದವರು ಎಂದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಒಂದು ಕೆರೆ ನಿರ್ಮಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ಆದರೆ ಇಮ್ಮಣ್ಣನವರು ಜಗಳೂರು ತಾಲೂಕಿನ ಸಂಗೇನಹಳ್ಳಿ, ಗಡಿಮಾಕುಂಟೆ, ತುಪ್ಪದಹಳ್ಳಿ ಸೇರಿ ರಾಜ್ಯದೆಲ್ಲೆಡೆ ಸುಮಾರು 700 ಕೆರೆಗಳನ್ನು ಕಟ್ಟಿ ಮರೆಯಲಾಗದ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.
ಸದಾ ನೀರಿನ ಬವಣೆಯಿಂದ ಬಳಲುತ್ತಿದ್ದ ಜಗಳೂರು ತಾಲೂಕು ಸಿರಿಗೆರೆ ಡಾ. ಶಿವಮೂರ್ತಿ ಶ್ರೀಗಳ ದೂರದೃಷ್ಟಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯಿಂದ ಹಸಿರು ನಾಡಿನಂತೆ ಕಂಗೊಳಿಸುತ್ತಿದೆ. ಈ ಮೂಲಕ ರೈತರು, ಜನರ ಜೀವನ ಮಟ್ಟವು ಸುಧಾರಿಸಿದೆ ಎಂದರು.
ಮಾಜಿ ಶಾಸಕ ವೈಎಸ್‌ವಿ ದತ್ತ ಇವರಿಗೆ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿದರು. ಜೆ.ಎಂ ಇಮಾಂ ಟ್ರಸ್ಟ್ ಗೌರವಾಧ್ಯಕ್ಷ ಹಾಜಿ ಜೆ.ಕೆ. ಹುಸೇನ್ ಮಿಯ್ಯಸಾಬ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಹಾಲೇಶ್, ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.