ಜಗಳೂರಿನ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿರುವ ಮಕ್ಕಳ ಗ್ರಂಥಾಲಯದಲ್ಲಿ ಶನಿವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಚಿತ್ರ ಬಿಡಿಸುತ್ತಿರುವ ವಿದ್ಯಾರ್ಥಿಗಳು. 
ದಾವಣಗೆರೆ

ಜಗಳೂರಿನಲ್ಲಿ ಮಕ್ಕಳಿಗೆ ಚಿತ್ರಕಲೆ, ಭಾಷಣ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ
  • 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಜಗಳೂರು: ಚಿಣ್ಣರು, ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬುತ್ತಿದ್ದರು. ಪ್ರಾಣಿ, ಪಕ್ಷಿ, ಪ್ರಕೃತಿ, ಚಿಟ್ಟೆಗಳು, ಸೂರ್ಯ, ಕಾಮನಬಿಲ್ಲು, ರಾಷ್ಟ್ರಧ್ವಜ, ದೇವರ ಚಿತ್ರ ಹೀಗೆ ಒಬ್ಬೊಬ್ಬರು ಒಂದೊಂದು ವಿಷಯದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆದರು. ಪುಸ್ತಕದ ಮಹತ್ವ, ಗ್ರಂಥಾಲಯದ ಮಹತ್ವ ಕುರಿತು ಭಾಷಣ ಮಾಡಿದರು.
ಇವು ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿರುವ ಮಕ್ಕಳ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಯುಕ್ತ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲೆ, ಭಾಷಣ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ. ಗ್ರಂಥಾಲಯದಲ್ಲಿ ಬೆಳಗ್ಗೆ 11ಕ್ಕೆ ಆರಂಭವಾದ ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ, ನವಚೇತನ ಶಾಲೆ, ಮೌಲಾನಾ ಆಜಾದ್ ಶಾಲೆ, ಜೆಎಂ ಇಮಾಂ ಶಾಲೆ, ಎನ್‌ಎಂಕೆ ಶಾಲೆ, ಹೊಸಕೆರೆ ಸರ್ಕಾರಿ ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಮತ್ತು 8,9,10ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಈ ವೇಳೆ ಗ್ರಂಥಾಲಯ ಸಹಾಯಕ ಶರಣಪ್ಪ ಮಾತನಾಡಿ, ಮಕ್ಕಳು ತಮ್ಮ ಆಲೋಚನೆ ಕ್ರಮಗಳಿಗೆ ಅನುಗುಣವಾಗಿ ವಿಭಿನ್ನವಾಗಿ ಬರೆಯುತ್ತಾರೆ. ಅವರಿಗೆ ಇದು ಒಳ್ಳೆಯ ವೇದಿಕೆ. ಶಾಲೆಯ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಸರ್ವಜಾತಿ, ಧರ್ಮ, ಮತ, ಪಂಥ, ಭಾಷೆಯವರನ್ನೂ ಸೆಳೆದುಕೊಳ್ಳುವ ಶಕ್ತಿ ಚಿತ್ರಗಳಿಗಿವೆ. ಅನುವಾದಕರ ಅವಶ್ಯಕತೆ ಇಲ್ಲದೆಯೇ ಸಂವಹನ ನಡೆಸಬಲ್ಲ ವಿಶ್ವಭಾಷೆಯೇ ಚಿತ್ರಕಲೆ. ಮನಸ್ಸನ್ನು ಆಕರ್ಷಿಸಿ ಉಲ್ಲಾಸಗೊಳಿಸುವ ಚಿತ್ರಗಳ ಜತೆ ಮಕ್ಕಳು ಒಡನಾಡುತ್ತ ಓದು ಮತ್ತು ಬರಹದತ್ತ ಸಹಜವಾಗಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ನ.16 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಬಹುಮಾನ ವಿತರಣೆ ಮಾಡಲಿದ್ದಾರೆ. ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಉಪ ನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಭಾಗವಹಿಸಲಿದ್ದಾರೆ.