ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಭೇಟಿ ನೀಡಿ ಪರಿಶೀಲಿಸಿದರು. ವೈದ್ಯಾಧಿಕಾರಿ ಡಾ. ರಾಘವೇಂದ್ರಪ್ಪ, ಡಾ. ಷಣ್ಮುಖಪ್ಪ, ಡಾ. ಜಗನಾಥ್ ಇದ್ದರು.upper floor 
ದಾವಣಗೆರೆ

ಕೆಳಮಹಡಿ ಪುಲ್‌, ಮೇಲ್ಮಹಡಿ ಖಾಲಿ

ಶೋಭಾ ಕೃಷ್ಣ ಗೌಡ
ಜಗಳೂರು: ಎರಡನೇ ಮಹಡಿಯಲ್ಲಿರುವ ವಿಶಾಲ ಸಾಮಾನ್ಯ ವಾರ್ಡ್‌ಗಳಿಗೆ ರೋಗಿಗಳನ್ನು ದಾಖಲಿಸದೆ, ಕೆಳಮಹಡಿಯಲ್ಲಿ ಮಿತಿ ಮೀರಿ ರೋಗಿಗಳನ್ನು ತುಂಬಿರುವುದಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ವೈದ್ಯರ ವಿರುದ್ಧ ಗರಂ ಆದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರೊಂದಿಗೆ ದಿಢೀರ್ ಭೇಟಿ ನೀಡಿ, ಮೂಲಸೌಕರ್ಯ, ವೈದ್ಯರು-ಸಿಬ್ಬಂದಿಯ ಲಭ್ಯತೆ, ಚಿಕಿತ್ಸಾ ವ್ಯವಸ್ಥೆ ಹಾಗೂ ನೈರ್ಮಲ್ಯವನ್ನು ಪರಿಶೀಲಿಸಿದರು. ಆಸ್ಪತ್ರೆಯ ಕೆಳಮಹಡಿಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳ ವಾರ್ಡ್‌ಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ನೂಕುನುಗ್ಗಲು ಉಂಟಾಗಿದೆ. ಐಸಿಯು ಹಾಗೂ ಮೇಲಿನ ವಾರ್ಡ್‌ಗಳು ವಿಶಾಲವಾಗಿ ಹಾಗೂ ಸ್ವಚ್ಛತೆಯಿಂದ ಕೂಡಿವೆ. ಹೀಗಿದ್ದರೂ ರೋಗಿಗಳನ್ನು ಕೆಳ ಮಹಡಿಯಲ್ಲಿ ಇಟ್ಟಿರುವುದಕ್ಕೆ ಕಾರಣವೇನು? ತಕ್ಷಣವೇ ಅವರನ್ನು ಮೇಲಿನ ವಾರ್ಡ್‌ಗಳಿಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಅಧಿಕಾರಿಗಳ ಈ ಬೇಜವಾಬ್ದಾರಿ ನಡವಳಿಕೆ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಗೆ ಬಹುತೇಕ ಬಡ ರೋಗಿಗಳು ಬರುತ್ತಾರೆ. ಯಾವುದೇ ಕಾರಣಕ್ಕೂ ಹೊರಗಿನ ಮೆಡಿಕಲ್ ಶಾಪ್‌ಗಳಿಗೆ ಔಷಧ ತರಲು ಚೀಟಿ ಬರೆದುಕೊಡಬಾರದು. ಒಂದು ವೇಳೆ ಚೀಟಿ ಬರೆದುಕೊಟ್ಟದ್ದು ಕಂಡುಬಂದರೆ ಸಂಬಂಧಪಟ್ಟ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ಪ್ರತಿ ನಿತ್ಯ ಜಗಳೂರು, ಕೂಡ್ಲಿಗಿ, ಕೊಟ್ಟೂರು, ಕಾನಹೊಸಳ್ಳಿ, ನಾಯಕನಹಟ್ಟಿ ಭಾಗದಿಂದ 1,000 ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಪ್ರಸ್ತುತ 10 ವೈದ್ಯರು ಕರ್ತವ್ಯದಲ್ಲಿದ್ದು, ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ರೋಗಿಗಳ ಆರೈಕೆ ಮತ್ತು ಸುರಕ್ಷತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸಬೂಬು ಹೇಳಬಾರದು. ನಿರ್ಲಕ್ಷೃ ವಹಿಸಬಾರದು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಡಾ. ಷಣ್ಮುಖಪ್ಪ, ಡಾ. ಜಗನ್ನಾಥ್, ಏಕಾಂತಮ್ಮ ಇದ್ದರು.

ಸೌಲಭ್ಯಗಳ ವಿಚಾರಣೆ

ದಾವಣಗೆರೆಯಿಂದ ಆಗಮಿಸಿದ ಜಿಲ್ಲಾಧಿಕಾರಿ ನೇರವಾಗಿ ಆಸ್ಪತ್ರೆಗೆ ಧಾವಿಸಿ, ಆವರಣ ಹಾಗೂ ಪಾರ್ಕ್ ವೀಕ್ಷಿಸಿದರು. ಬಳಿಕ ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ, ಅವರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಹೆರಿಗೆ ಕೊಠಡಿ, ಹೆರಿಗೆ ವಾರ್ಡ್, ಇಂಜೆಕ್ಷನ್ ರೂಂ, ಆಪರೇಷನ್ ಥಿಯೇಟರ್, ಲ್ಯಾಬ್, ಎಕ್ಸೃ್-ರೇ ಹಾಗೂ ಐಸಿಯು ವಾರ್ಡ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಔಷಧ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ ಔಷಧಗಳು ರೋಗಿಗಳಿಗೆ ಉಚಿತವಾಗಿ ತಲುಪುತ್ತಿವೆಯೇ ಎಂದು ಪರಿಶೀಲಿಸಿದರು.

ಅಧಿಕಾರಿಗಳ ಪ್ರಮುಖ ನಿರ್ದೇಶನಗಳು

ಸ್ಕ್ಯಾನಿಂಗ್, ಅಲ್ಟ್ರಾಸೌಂಡ್ ಹಾಗೂ ಐಸಿಯು ವ್ಯವಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಆಸ್ಪತ್ರೆಯಲ್ಲಿ ಔಷಧ ಕೊರತೆಯಾದರೆ ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತಂದು ದಾಸ್ತಾನು ಮಾಡಿಕೊಳ್ಳಬೇಕು. ನಿರ್ಲಕ್ಷೃ ವಹಿಸಿದರೆ ರೋಗಿಗಳ ಜೀವಕ್ಕೆ ಕುತ್ತು ಬರುತ್ತದೆ.