ದಾವಣಗೆರೆಯಲ್ಲಿ ಶುಕ್ರವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಮತದಾರರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಸ್ವಯಂ ಗಣತಿ ನಮೂನೆಗಳನ್ನು ಸ್ವೀಕರಿಸಿದರು. ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇದ್ದರು. 
ದಾವಣಗೆರೆ

ಮತದಾರರ ಮನೆ ಮನೆ ಭೇಟಿ ಕಡ್ಡಾಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಸೂಚನೆ
  • ಪ್ರಗತಿ ಪರಿಶೀಲನಾ ಸಭೆ
ದಾವಣಗೆರೆ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್.ಐ.ಆರ್. ಪ್ರಕ್ರಿಯೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ಪ್ರತಿ ಮತದಾರರ ಮನೆಗೂ ಭೇಟಿ ನೀಡಲೇಬೇಕು, ಯಾವುದೇ ಕಾರಣಕ್ಕೂ ನೀವಿದ್ದ ಬಳಿ ಮತದಾರರನ್ನು ಕರೆಸಿಕೊಳ್ಳಬಾರದು. ಈ ಬಗ್ಗೆ ಬಿ.ಎಲ್.ಒ, ಮೇಲ್ವಿಚಾರಕರು ಮತ್ತು ನೋಡಲ್ ಅಧಿಕಾರಿಗಳು ಗಮನ ವಹಿಸಲು ಸೂಚನೆ ನೀಡಿದರು.
ಕರಡು ಪಟ್ಟಿಯನ್ವಯ ಜಿಲ್ಲೆಯಲ್ಲಿ 14,99,282 ಮತದಾರರಿದ್ದು 1760 ಮತಗಟ್ಟೆಗಳಿವೆ. ಇದರಲ್ಲಿ 1452504 ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ. ಮುಂದಿನ 4 ದಿನಗಳಲ್ಲಿ ಜಿಲ್ಲೆಯ ಎಲ್ಲ ಮತದಾರರ ಮನೆಗೂ ಸ್ವಯಂ ಗಣತಿ ನಮೂನೆಗಳನ್ನು ಕಡ್ಡಾಯವಾಗಿ ವಿತರಣೆ ಮಾಡುವುದನ್ನು ಪೂರ್ಣಗೊಳಿಸಬೇಕು ಎಂದು ನೋಡಲ್ ಅಧಿಕಾರಿಗಳಿಗೆ ತಿಳಿಸಿದರು.
ಸ್ವಯಂ ಗಣತಿ ನಮೂನೆಗಳನ್ನು ವಿತರಣೆ ಮಾಡಿದ ಕ್ಷೇತ್ರಗಳಲ್ಲಿ ಚನ್ನಗಿರಿ ಮೊದಲ ಸ್ಥಾನದಲ್ಲಿದ್ದು ಇದೇ ರೀತಿ ಎಲ್ಲ ತಾಲೂಕುಗಳಲ್ಲಿ ಎಸ್.ಐ.ಆರ್. ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಲು ಸೂಚನೆ ನೀಡಿದರು.
ಜಗಳೂರು ಪಟ್ಟಣದ ಮತಗಟ್ಟೆ ಮತ್ತು ದಾವಣಗೆರೆ ಆಜಾದ್ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿದ ಕಾರ್ಯದರ್ಶಿ, ಎಸ್.ಐ.ಆರ್. ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾರರನ್ನು ಭೇಟಿ ಮಾಡಿ ಸ್ವಯಂ ಗಣತಿ ನಮೂನೆಗಳನ್ನು ಸ್ವೀಕರಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಭೆಯಲ್ಲಿದ್ದರು.