ಹೊನ್ನಾಳಿ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ಕೃಷಿ ಮೇಳವನ್ನು ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಶಿವಕುಮಾರ ಹಾಲಸ್ವಾಮೀಜಿ, ಯು.ಬಿ. ಬಣಕಾರ್, ಎಂ.ಪಿ. ರೇಣುಕಾಚಾರ್ಯ, ಎಚ್.ಬಿ. ಮಂಜಪ್ಪ, ಎಚ್.ಎ. ಉಮಾಪತಿ ಇತರರಿದ್ದರು.Agricultural Fair 
ದಾವಣಗೆರೆ

ನೌಕರಿ ವ್ಯಾಮೋಹದಲ್ಲಿ ಕೃಷಿ ನಿರ್ಲಕ್ಷಿಸಬೇಡಿ

ಪ್ರಮುಖ ಮುಖ್ಯಾಂಶಗಳು

  • ಕಾಶಿ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
  • ರಾಜ್ಯಮಟ್ಟದ ಕೃಷಿಮೇಳಕ್ಕೆ ಚಾಲನೆ
ಹೊನ್ನಾಳಿ: ಇಂದಿನ ಯುವ ಪೀಳಿಗೆ ನೌಕರಿ ಮತ್ತು ವ್ಯಾಪಾರದತ್ತ ಆಕರ್ಷಿತರಾಗುತ್ತಿರುವುದರಿಂದ ಕೃಷಿ ಹಿನ್ನೆಲೆಗೆ ಸರಿದಿದೆ. ಕೃಷಿ ಎಂಬುದು ಕೇವಲ ಕಸುಬಲ್ಲ, ಅದು ದೇಶದ ಆಹಾರ ಭದ್ರತೆಯ ಅಡಿಪಾಯ ಎಂದು ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಲಿಂ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳು ಹಾಗೂ ಲಿಂ. ಚಂದ್ರಶೇಖರ ಶಿವಾ ಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕೃಷಿಮೇಳದ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿದರು.
ನಮ್ಮ ಪೂರ್ವಜರ ಕಾಲದಲ್ಲಿ ಕೃಷಿ ಉನ್ನತ ಸ್ಥಾನದಲ್ಲಿತ್ತು. ಆದರೆ ಇಂದು ನೌಕರಿ ಮೊದಲ ಸ್ಥಾನಕ್ಕೇರಿ ಕೃಷಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನೌಕರಿ ಮಾಡುವ ಮಗನಿಗೆ ಸಿಗುವ ಗೌರವ ಕೃಷಿ ಮಾಡುವ ಮಗನಿಗೆ ಸಿಗುತ್ತಿಲ್ಲ. ಜ್ಞಾನವಂತ ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡರೆ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಮಾತನಾಡಿ, ಕೇವಲ ವೇದಿಕೆಗಳಲ್ಲಿ ರೈತರ ಬಗ್ಗೆ ಮಾತನಾಡಿದರೆ ಸಾಲದು, ಅವರ ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ರಾಮಪುರ ಶ್ರೀಮಠದ ಶಿವಕುಮಾರ ಹಾಲಸ್ವಾಮೀಜಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಅಧ್ಯಕ್ಷತೆ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿನಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ಮಾಜಿ ಶಾಸಕ ವೈ. ಸಂಪಂಗಿ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿದರು.
ಅನ್ನ ಸಂತರ್ಪಣೆ: ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ರೈತರು ಸರತಿಯಲ್ಲಿ ನಿಂತು ಊಟ-ಉಪಾಹಾರ ಸವಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಎಚ್.ಎ. ಉಮಾಪತಿ, ರೈತ ಮುಖಂಡ ಹಿರೇಮಠದ ಬಸವರಾಜಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್. ಗದ್ದಿಗೇಶ್, ಪುರಸಭೆ ಮಾಜಿ ಸದಸ್ಯ ಹೊಸಕೇರಿ ಸುರೇಶ್, ಅನ್ನದಾನಯ್ಯ, ಪಂಚಾಕ್ಷರಯ್ಯ, ವೀರಣ್ಣ, ದಿದಗೂರು ಪಾಲಾಕ್ಷಪ್ಪ, ವಾಸಪ್ಪ, ಕುಮಾರಸ್ವಾಮಿ, ಶಾಂತ ಸುರೇಶ್, ದಾನಪ್ಪ, ಲಾವಣ್ಯ, ಮಧುಗೌಡ ಇತರರು ಇದ್ದರು.

ಕೃಷಿ ಪರಿಕರಗಳ ಪರಿಚಯ

ಶಾಸಕ ಡಿ.ಜಿ. ಶಾಂತನಗೌಡ ಸ್ವಾಗತ ಭಾಷಣ ಮಾಡಿ, ಮಠ ಮಾನ್ಯಗಳು ಎಂದಿಗೂ ಧರ್ಮ, ಸಂಸ್ಕಾರ, ಮೌಲ್ಯಗಳ ಬಗ್ಗೆ ಮಾತನಾಡುತ್ತವೆ. ಆದರೆ ವಿಶೇಷವಾಗಿ ನಮ್ಮ ಹಿರೇಕಲ್ಮಠ ರೈತರ ಬಗ್ಗೆ ಚಿಂತಿಸಿ, ಕೃಷಿಮೇಳ ನಡೆಸುವ ಮೂಲಕ ರೈತರಿಗೆ ಬೇಕಾದ ಕೃಷಿ ಪರಿಕರ ಹಾಗೂ ಆಧುನಿಕ ಬೇಸಾಯದ ಬಗ್ಗೆ ತಿಳಿಸಲು ಮುಂದಾಗಿದೆ. ಇದರಿಂದ ನಮ್ಮ ಶ್ರೀಗಳು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ರೈತನ ಬದುಕು ಹಸನಾಗಲಿ

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರೈತನ ಬದುಕು ಇಂದು ದುಸ್ತರವಾಗಿದೆ. ಅವರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದಲೇ ಮಠದಿಂದ ಈ
ಕೃಷಿಮೇಳ ಆಯೋಜಿಸಲಾಗಿದೆ. ರೈತ ಯಾವಾಗ ನೆಮ್ಮದಿ ಜೀವನ ಸಾಗಿಸುತ್ತಾನೋ ಆಗ ಮಾತ್ರ ಎಲ್ಲರ ನೆಮ್ಮದಿ ಸಾಧ್ಯ ಎಂದು ತಿಳಿಸಿದರು. ಕೆಲವರು ಕೃಷಿಮೇಳ ನಡೆಸಲು ಸಮಯ ಅವಕಾಶ ಕಡಿಮೆ ಇದೆ ಎಂದು ಹೇಳಿದ್ದರೂ, ನಾವು ಎಲ್ಲವನ್ನು ಅನುವು ಮಾಡಿಕೊಂಡು ಎಲ್ಲರ ಸಹಕಾರದಿಂದ ಕೃಷಿಮೇಳ ನಡೆಸುತ್ತಿದ್ದೇವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಇತರರು ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾಶಿ ಜಗದ್ಗುರುಗಳ ಭವ್ಯ ಪುರಪ್ರವೇಶ
ರಾಜ್ಯಮಟ್ಟದ ಕೃಷಿ ಮೇಳದ ಹಿನ್ನೆಲೆಯಲ್ಲಿ ಕಾಶಿ ಪೀಠದ ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶುಕ್ರವಾರ ಅದ್ದೂರಿಯಾಗಿ ಪುರಪ್ರವೇಶ ಮಾಡಿದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಸಕ ಡಿ.ಜಿ. ಶಾಂತನಗೌಡ ಅವರ ನೇತೃತ್ವದಲ್ಲಿ ಜಗದ್ಗುರುಗಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ನಂತರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಲಂಕೃತಗೊಂಡ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಠಕ್ಕೆ ಕರೆತರಲಾಯಿತು. ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ ಮನೆಗಳ ಮುಂದೆ ರಂಗೋಲಿ ಬಿಡಿಸಿ, ಹೂವಿನ ತೋರಣ ಕಟ್ಟಿ ಭಕ್ತಿ ಸಮರ್ಪಿಸಲಾಯಿತು.
101 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಹಿರೇಕಲ್ಮಠದ ಆನೆ ಸುಭದ್ರೆಯ ಗಾಂಭೀರ್ಯದ ನಡಿಗೆ ಹಾಗೂ ವಾದ್ಯಮೇಳ, ಹಲಗೆ, ಡೊಳ್ಳು ಕುಣಿತ ಹಾಗೂ ಜಾಂಜ್ ಮೇಳದ ಸದ್ದು ಮೆರವಣಿಗೆಗೆ ಕಳೆ ತಂದವು. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು.
ಆಕರ್ಷಕ ಕಲಾಕೃತಿಗಳು: ಕೃಷಿ ಮೇಳದ ಅಂಗವಾಗಿ ಮಠದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯಗಳನ್ನು ಬಳಸಿ ಬಿಡಿಸಲಾದ ಆಕರ್ಷಕ ರಂಗೋಲಿ ಎಲ್ಲರ ಗಮನ ಸೆಳೆಯಿತು. ತೋಟಗಾರಿಕೆ ಇಲಾಖೆಯು ವಿವಿಧ ಹೂವುಗಳಿಂದ ಆನೆಯ ಚಿತ್ರವನ್ನು ಸಿದ್ಧಪಡಿಸಿತ್ತು ಹಾಗೂ ತರಕಾರಿಗಳಲ್ಲಿ ವಿವಿಧ ಪ್ರಾಣಿಗಳ ಆಕೃತಿಗಳನ್ನು ಕೆತ್ತಲಾಗಿತ್ತು.
ಮೆರವಣಿಗೆಯಲ್ಲಿ ಗೋವಿನಕೋವಿ ಶ್ರೀಮಠದ ಎಚ್. ಉಮಾಪತಿ, ಕೋರಿ ಮಲ್ಲಿಕಪ್ಪ, ಗುರುಲಿಂಗಪ್ಪ, ಪುರಸಭಾ ಮಾಜಿ ಸದಸ್ಯ ಸುರೇಶ್ ಹೊಸಕೇರಿ, ನಾಗರಾಜ್ ಕತ್ತಿಗೆ, ಕುಮಾರಸ್ವಾಮಿ ಇತರರಿದ್ದರು.