ದಾವಣಗೆರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಮಾತನಾಡಿದರು. ಕೆ.ಎಂ. ಸುರೇಶ್, ರೇವಣಸಿದ್ದಪ್ಪ ಅಂಗಡಿ, ಮಧುಕುಮಾರ್, ಸುಮತಿ ಜಯಪ್ಪ ಇತರರಿದ್ದರು.  
ದಾವಣಗೆರೆ

ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚದಿರಿ

ಪ್ರಮುಖ ಮುಖ್ಯಾಂಶಗಳು

  • ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕಲ್ಪಿಸಿ
  • ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವಾಗಿ ಘೋಷಿಸಿ
  • ಕಸಾಪ ಜಿಲ್ಲಾ ಕಾರ್ಯಕಾರಿಣಿಯಲ್ಲಿ 3 ನಿರ್ಣಯ
ದಾವಣಗೆರೆ: ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯಲು ತೀರ್ಮಾನಿಸಿದ್ದು, ಕನ್ನಡ ಮಾಧ್ಯಮದ ಶಾಲೆಗಳಿಗೆ ತೊಂದರೆ ಆಗದಂತೆ ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮ ವಹಿಸುವುದೂ ಸೇರಿ ಮೂರು ಪ್ರಮುಖ ನಿರ್ಣಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿಣಿ ಸಭೆ ಅಂಗೀಕರಿಸಿದೆ.
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು.
ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ 2026- 27ನೇ ಶೈಕ್ಷಣಿಕ ಸಾಲಿನಿಂದಲೇ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಭಾಷೆಯಿಂದಲೇ ಆರಂಭಿಸಬೇಕು.
ಬೆಳಗಾವಿಯು ರಾಜ್ಯದ ಅವಿಭಾಜ್ಯ ಅಂಗವೆಂದು ಬೆಳಗಾವಿ ಮಹಾನಗರ ಪಾಲಿಕೆ ತಕ್ಷಣ ನಿರ್ಣಯ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವು ಆಜ್ಞಾಪಿಸಬೇಕು. ಹಾಗೂ ಬಿಜೆಪಿ ಆಡಳಿತವಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರಗಳು ಪ್ರಭಾವ ಬೀರಿ ತಕ್ಷಣ ನಿರ್ಣಯಿಸಲು ಆಗ್ರಹಪಡಿಸಬೇಕು.
ಈ ಮೂರೂ ನಿರ್ಣಯಗಳನ್ನು ಮಂಡಿಸಿದ ಜಿಲ್ಲಾಧ್ಯಕ್ಷ ವಾಮದೇವಪ್ಪ, ಇವನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಮುಂಬರುವ ದಿನಗಳಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ದತ್ತಿ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಒಂದು ದಿನದ ಮಹಿಳಾ ಸಮ್ಮೇಳನವನ್ನು ಸಹ ಸ್ಥಳೀಯ ಸಂಪನ್ಮೂಲಗಳ ಸಹಕಾರದಿಂದ ನಡೆಸುವಂತೆಯೂ ಸೂಚಿಸಿದಾಗ ಸಭೆಯು ಸಹಮತ ವ್ಯಕ್ತಪಡಿಸಿತು.
ಸಂಘದ ಲೆಕ್ಕ ಪತ್ರಗಳನ್ನು ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಮಂಡಿಸಿದರು. ಹಿಂದಿನ ಸಭೆಯ ನಡಾವಳಿಗಳನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಜಿ ಜಗದೀಶ್ ಕೂಲಂಬಿ ಓದಿದರು.
ಜಿಲ್ಲಾ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕಸಾಪ ತಾಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಜಿ. ಮುರಿಗೆಪ್ಪ ಗೌಡ, ಎಲ್.ಜಿ.ಮಧುಕುಮಾರ್, ಬಿ.ಎಂ.ಹಾಲರಾಧ್ಯ, ಸುಜಾತಮ್ಮ ರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಕರಿಬಸಪ್ಪ, ವೀರೇಶ್‌ಪ್ರಸಾದ್,ಕೆ.ಎಂ.ಸುರೇಶ್, ಎಸ್.ಎಂ. ಮಲ್ಲಮ್ಮ, ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿಬಾಯಿ ಇದ್ದರು. ರೇವಣಸಿದ್ದಪ್ಪ ಅಂಗಡಿ ಸ್ವಾಗತಿಸಿದರು. ಜಿಗಳಿ ಪ್ರಕಾಶ್ ವಂದಿಸಿದರು.