ಚನ್ನಗಿರಿ ತಾಲೂಕಿನ ಬಸವಾಪುರ ಗ್ರಾಮದ ಬಳಿ ಭದ್ರಾ ನಾಲೆಗೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡಿರುವುದರಿಂದ ಅನಾಹುತ ತಪ್ಪಿಸಲು ಗ್ರಾಮಸ್ಥರೇ ಸೇತುವೆಗೆ ಅಡ್ಡಲಾಗಿ ಸಿಮೆಂಟ್ ಗೋಡೆ ಹಾಗೂ ಮರದ ದಿಮ್ಮಿಗಳನ್ನಿಟ್ಟು ಸಂಚಾರ ಬಂದ್ ಮಾಡಿರುವುದು.shithila bridge 
ದಾವಣಗೆರೆ

ಶಿಥಿಲಗೊಂಡ ಸೇತುವೆ ಗ್ರಾಮಸ್ಥರಿಂದಲೇ ಬಂದ್ shithila bridge

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಸಂಚಾರ ಸ್ಥಗಿತ
  • ನಾಲ್ಕು ಹಳ್ಳಿಗಳ ಜನರ ಓಡಾಟಕ್ಕೆ ತೊಂದರೆ
  • ತಮಟೆ ಬಾರಿಸಿ ಜಾಗೃತಿ
ಚನ್ನಗಿರಿ: ತಾಲೂಕಿನ ಬಸವಾಪುರ ಗ್ರಾಮದ ಬಳಿ ಭದ್ರಾ ನಾಲೆಯ ಮೇಲೆ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆ ತಲುಪಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ, ಗ್ರಾಮಸ್ಥರೇ ಸೇತುವೆಗೆ ಅಡ್ಡಲಾಗಿ ಸಿಮೆಂಟ್ ಗೋಡೆ ಕಟ್ಟಿ, ಮರದ ದಿಮ್ಮಿಗಳನ್ನಿಟ್ಟು ಬುಧವಾರ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
ಈ ಸೇತುವೆಯು ತಾಲೂಕಿನ ದೇಗರದಳ್ಳಿ, ಗುರುರಾಜಪುರ, ಲಕ್ಷ್ಮಯ್ಯ ಕ್ಯಾಂಪ್ ಹಾಗೂ ಬಸವಾಪುರ ಗ್ರಾಮಗಳ ಸಂಪರ್ಕ ಕೊಂಡಿಯಾಗಿದೆ. ನಿತ್ಯ ನೂರಾರು ಜನ ಹಾಗೂ ವಾಹನಗಳು ಇದರ ಮೇಲೆಯೇ ಸಂಚರಿಸುತ್ತವೆ. ಆದರೆ, ಸೇತುವೆಯ ಕೆಳಭಾಗದ ಮಣ್ಣು ಕುಸಿದು ಹೋಗುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಇದು ಕುಸಿದು ಬೀಳುವ ಅಪಾಯವಿದೆ. ಅನಾಹುತ ಸಂಭವಿಸಿ ಜೀವಹಾನಿಯಾಗುವ ಮುನ್ನ ಎಚ್ಚೆತ್ತುಕೊಂಡ ಗ್ರಾಮಸ್ಥರು ಸಭೆ ನಡೆಸಿ, ಸೇತುವೆ ಬಂದ್ ಮಾಡಲು ತೀರ್ಮಾನಿಸಿದರು. ಯಾರೂ ಈ ರಸ್ತೆಯಲ್ಲಿ ಸಂಚರಿಸಬಾರದು ಎಂದು ನಾಲ್ಕೂ ಗ್ರಾಮಗಳಲ್ಲಿ ತಮಟೆ ಬಾರಿಸಿ ಜಾಗೃತಿ ಮೂಡಿಸಿದ್ದಾರೆ.
ಸೇತುವೆ ಬಂದ್ ಆಗಿರುವುದರಿಂದ ನಾಲ್ಕು ಹಳ್ಳಿಗಳ ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ರೈತರಿಗೆ ಕೃಷಿ ಸಾಮಗ್ರಿಗಳನ್ನು ತರಲು ಹೋಗುವುದು ಕಷ್ಟವಾಗಿದೆ. ಶಾಲೆ, ಆಸ್ಪತ್ರೆ, ವ್ಯಾಪಾರ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಚನ್ನಗಿರಿಗೆ ಹೋಗಬೇಕಾದ ಸಾರ್ವಜನಿಕರು ಹಾಗೂ ವಾಹನ ಸವಾರರು ಈಗ ಸಿದ್ದಾಪುರ ಅಥವಾ ಗುರುರಾಜಪುರ ಗ್ರಾಮಗಳ ಮೂಲಕ ಸುಮಾರು 3 ಕಿ.ಮೀ. ಹೆಚ್ವುವರಿ ದೂರ ಸುತ್ತಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರತಿಭಟನೆಯ ಎಚ್ಚರಿಕೆ

ಸೇತುವೆಯ ಕೆಳಗೆ ಮಣ್ಣು ಕುಸಿಯುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಇದುವರೆಗೆ ಯಾರೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ. ಜನರ ಪ್ರಾಣರಕ್ಷಣೆಗಾಗಿ ನಾವೇ ಸೇರಿ ಸೇತುವೆ ಬಂದ್ ಮಾಡಿದ್ದೇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹೊಸ ಸೇತುವೆ ನಿರ್ಮಿಸದಿದ್ದರೆ ಅಥವಾ ದುರಸ್ತಿ ಮಾಡದಿದ್ದರೆ ಚನ್ನಗಿರಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ರಂಗನಾಥ್ ಹೇಳಿದ್ದಾರೆ.