ದಾವಣಗೆರೆ ಜಿಲ್ಲೆಯಲ್ಲಿ ತಾಪಮಾನ
- ತಾಪಮಾನದಿಂದ ರಕ್ಷಣೆ ಪಡೆಯಲು ಮನವಿ
- ಜಿಲ್ಲಾದ್ಯಂತ ಬಿಸಿಗಾಳಿ ತೀವ್ರಗೊಳ್ಳುವ ಸಾಧ್ಯತೆ
- ಮುನ್ನೆಚ್ಚರಿಕೆ ವಹಿಸಲು ನಾಗರಿಕರಿಗೆ ಸೂಚನೆ
ದಾವಣಗೆರೆ: ಜಿಲ್ಲೆಯಲ್ಲಿ ಸೂರ್ಯನ ತಾಪಮಾನ ದಿನೇದಿನೆ ಏರುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಮಾರ್ಗಸೂಚಿಯನ್ನು ಜನರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಫೆಬ್ರವರಿ ಕೊನೆಯ ವಾರದಲ್ಲಿ ಜಿಲ್ಲೆಯಲ್ಲಿ ತಾಪಮಾನವು ಗರಿಷ್ಠ 33 ನಿಂದ 36 ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಫೆ. 25ರಂದು ಗರಿಷ್ಠ 35.5ರಷ್ಟಿದ್ದ ತಾಪಮಾನ, 26ರಂದು 34.4, 27ರಂದು ಗರಿಷ್ಠ ತಾಪಮಾನ 33, ಕನಿಷ್ಠ 19 ಸೆಲ್ಸಿಯಸ್, ಶನಿವಾರದಂದು ಗರಿಷ್ಠ 33.9, ಕನಿಷ್ಠ ತಾಪಮಾನ 20.4ರಷ್ಟು ದಾಖಲಾಗಿದೆ.
ಫೆಬ್ರವರಿ ತಿಂಗಳಲ್ಲಿ ತಾಪಮಾನವು ಸರಾಸರಿ 25 ಸೆಲ್ಸಿಯಸ್‌ನಷ್ಟಿದ್ದು, ಮತ್ತಷ್ಟು ತಾಪ ಹೆಚ್ಚಿದೆ. ಹೀಗಾಗಿ ಜನರು ಕೆಲವು ಸೂಚನೆ ಪಾಲಿಸಬೇಕು. ಹೆಚ್ಚು ನೀರು ಕುಡಿಯಿರಿ, ಬಾಯಾರಿಕೆ ಇಲ್ಲದಿದ್ದರೂ ನಿಯಮಿತ ನೀರು, ಒಆರ್‌ಎಸ್, ಮಜ್ಜಿಗೆ, ಲಿಂಬೆ ಪಾನಕ ಅಥವಾ ಎಳನೀರನ್ನು ಸೇವಿಸಬೇಕು.
ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ಕನ್ನಡಕ ಬಳಸಬೇಕು. ಮಕ್ಕಳಿಗೆ ಕುದಿಸಿ ಆರಿಸಿದ ನೀರು ಮತ್ತು ತಾಜಾ ಆಹಾರ ನೀಡಬೇಕು. ಮಧ್ಯಾಹ್ನದ ವೇಳೆ ಮಕ್ಕಳನ್ನು ಬಿಸಿಲಿಗೆ ಬಿಡಬಾರದು. ಕೆಲಸದ ನಡುವೆ ಆಗಾಗ್ಗೆ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು. ಮನೆಗಳನ್ನು ತಂಪಾಗಿರಿಸಲು ಕಿಟಕಿಗಳಿಗೆ ಪರದೆ ಬಳಸಬೇಕು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಕಟ್ಟಿ ಹಾಕಿ ಮತ್ತು ಅವುಗಳಿಗೆ ಸಾಕಷ್ಟು ಕುಡಿಯುವ ನೀರು ನೀಡಬೇಕು.
ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಅತಿ ಹೆಚ್ಚು ಬಿಸಿಲಿರುವುದರಿಂದ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಮದ್ಯಪಾನ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸಬೇಡಿ. ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಅತಿ ಹೆಚ್ಚು ತಾಪಮಾನವಿರುವಾಗ ಕಠಿಣ ದೈಹಿಕ ಶ್ರಮದ ಕೆಲಸಗಳನ್ನು ಮಾಡಬೇಡಿ. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಒಬ್ಬಂಟಿಯಾಗಿ ಬಿಡಬಾರದು.
ದೇಹದ ಉಷ್ಣತೆ 40ಡಿಗ್ರಿಗಿಂತ ಹೆಚ್ಚಾಗುವುದು, ತಲೆಸುತ್ತು, ವಾಂತಿ, ತೀವ್ರ ತಲೆನೋವು ಅಥವಾ ಪ್ರಜ್ಞೆ ತಪ್ಪುವುದು ಶಾಖಾಘಾತದ ಲಕ್ಷಣಗಳಾಗಿವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ. ತಣ್ಣೀರಿನಿಂದ ಮೈ ಒರೆಸಿ ಅಥವಾ ಸ್ಪಂಜಿನಿಂದ ಸ್ನಾನ ಮಾಡಿಸಿ. ತಕ್ಷಣವೇ 108 ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳ ಸಮಯವನ್ನು ಬಿಸಿಲಿಗೆ ತಕ್ಕಂತೆ ಬದಲಾಯಿಸಲು ಮತ್ತು ಕಾರ್ಮಿಕರಿಗೆ ಮಧ್ಯಾಹ್ನದ ಸಮಯದಲ್ಲಿ ಕಡ್ಡಾಯ ವಿಶ್ರಾಂತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.