ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಅರಕೆರೆ ನಾಗರಾಜ್, ಜೆ.ಕೆ. ಸುರೇಶ್, ಕೆ.ಪಿ. ಕುಬೇಂದ್ರಪ್ಪ, ನೆಲಹೊನ್ನೆ ಮಂಜುನಾಥ್, ಮಾರುತಿನಾಯ್ಕ, ಸುರೇಂದ್ರನಾಯ್ಕ ಇತರರಿದ್ದರು.Protest 
ದಾವಣಗೆರೆ

ಸಂವಿಧಾನ ಅವಮಾನಿಸಿದ ಶಾಸಕರನ್ನು ವಜಾಗೊಳಿಸಿ Protest

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯ
  • ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ
ಹೊನ್ನಾಳಿ: ಸಂವಿಧಾನಬದ್ಧವಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ರಾಜ್ಯಪಾಲರನ್ನು ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ಅವಮಾನಿಸುವ ಮೂಲಕ ಸಂವಿಧಾನವನ್ನು ಅವಮಾನಿಸಿದ್ದಾರೆ. ಇಂತಹ ಶಾಸಕರನ್ನು ಕೂಡಲೇ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಕೇಂದ್ರವನ್ನು ಟೀಕಿಸುವ ಭಾಷಣದ ಪ್ರತಿಯನ್ನು ಓದಿಸಲು ರಾಜ್ಯಪಾಲರ ಮೇಲೆ ಒತ್ತಡ ಹೇರಿತ್ತು. ಆದರೆ, ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದಾರೆ. ಅವರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ನಡೆಸಿದ ಯತ್ನ ಫಲಿಸಿಲ್ಲ ಎಂಬ ಕಾರಣಕ್ಕೆ ಈಗ ರಾಜ್ಯಪಾಲರ ವಿರುದ್ಧವೇ ಟೀಕೆ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ರಾಷ್ಟ್ರಪತಿಗಳು ಈಗಾಗಲೇ ಅಂಕಿತ ಹಾಕಿರುವ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಟೀಕಿಸುವುದು ಸರಿಯಲ್ಲ. ನರೇಗಾ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೇಂದ್ರ ಸರ್ಕಾರವು ಕೂಲಿಕಾರ್ಮಿಕರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿದೆ. ಆದರೆ, ಆರ್ಥಿಕವಾಗಿ ಹಳಿ ತಪ್ಪಿರುವ ರಾಜ್ಯ ಸರ್ಕಾರವು ತನ್ನ ಪಾಲಿನ ಶೇ. 40ರಷ್ಟು ಅನುದಾನವನ್ನು ನೀಡಲು ಸಾಧ್ಯವಾಗದೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.
ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಲಂಚದ ಹಗರಣ ಬಯಲಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಸಚಿವ ಆರ್.ಬಿ. ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೆ ಬಿಜೆಪಿ ಹೋರಾಟದಿಂದ ವಿಶ್ರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡ ಕೆ.ಪಿ. ಕುಬೇಂದ್ರಪ್ಪ, ನೆಲಹೊನ್ನೆ ಮಂಜುನಾಥ್ ಮಾತನಾಡಿದರು. ಮುಖಂಡರಾದ ಮಾರುತಿನಾಯ್ಕ, ಸುರೇಂದ್ರನಾಯ್ಕ, ಎಸ್.ಎಸ್. ಬೀರಪ್ಪ, ಕೆ.ವಿ. ಶ್ರೀಧರ್, ರಂಗನಾಥ್, ರಾಜು ಹಿರೇಮಠ್, ರಮೇಶ್ ಗೌಡ, ಕುಮಾರಸ್ವಾಮಿ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.