ನೀಟ್ ಪರೀಕ್ಷೆ ಅಕ್ರಮ, ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಎಚ್.ಬಿ.ಮಂಜಪ್ಪ, ದಿನೇಶ್ ಕೆ. ಶೆಟ್ಟಿ, ಡಿ.ಬಸವರಾಜ್,ಅಯೂಬ್ ಪೈಲ್ವಾನ್, ಮಂಜಮ್ಮ, ಮಂಜುಳಮ್ಮ, ದಾಕ್ಷಾಯಣಮ್ಮ ಇತರರು ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದರು.  
ದಾವಣಗೆರೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • 7 ವರ್ಷದಲ್ಲಿ ನೀಟ್ ಸೇರಿ 70 ಪ್ರಶ್ನೆಪತ್ರಿಕೆ ಸೋರಿಕೆ
  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ದಾವಣಗೆರೆ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದರು.
ನೀಟ್ ಪರೀಕ್ಷೆ ಅಕ್ರಮ, ಇಂಧನ ಹಾಗೂ ಎಲ್‌ಪಿಜಿ ಬೆಲೆಏರಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಜಯದೇವ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಏಳು ವರ್ಷದಲ್ಲಿ ನೀಟ್ ಸೇರಿ ಇತರೆ ಪರೀಕ್ಷೆಗಳ 70 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಅಚ್ಛೇ ದಿನ್ ಇದೇನಾ? ಪ್ರತಿ ವರ್ಷವೂ ಸೋರಿಕೆ ರೂಢಿಗತವಾಗಿದೆ ಎಂದು ಕಿಡಿ ಕಾರಿದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ದೇಶದ ವಿದ್ಯಾರ್ಥಿಗಳು ಆತಂಕ ಹಾಗೂ ಖಿನ್ನತೆಗೆ ಒಳಗಾಗಿದ್ದಾರೆ. ಮಕ್ಕಳ ಪರೀಕ್ಷೆಗಾಗಿ ಅನೇಕ ಪಾಲಕರು ತಮ್ಮ ಒಡವೆ, ಹೊಲ ಅಡವಿಟ್ಟಿದ್ದಾರೆ. ಸಾಲ ಮಾಡಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಎಡವದಿರಲು ಕೇಂದ್ರ ಸರ್ಕಾರ ಇನ್ನೆಷ್ಟು ಪಾಠ ಕಲಿಯಬೇಕು? ಎಂದು ಪ್ರಶ್ನಿಸಿದರು.
ಪ್ರತಿ ವರ್ಷ ರಾಜ್ಯದಿಂದ 1.5 ಲಕ್ಷ, ದೇಶದಲ್ಲಿ 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಎದುರಿಸುತ್ತಿದ್ದಾರೆ. ಉತ್ತರಭಾರತದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ದಂಧೆ ನಡೆಯುತ್ತಿದೆ. ಇದರಿಂದ ಯಾರಿಗೆ ಲಾಭವಾಗುತ್ತಿದೆ ಎಂಬುದರ ಬಗ್ಗೆ ರಾಷ್ಟ್ರೀಯ ಪರೀಕ್ಷಾ (ಎನ್‌ಟಿಎ) ಸಂಸ್ಥೆಯಿಂದ ತನಿಖೆ ಆಗಬೇಕಿದೆ. ಆದರೆ, ಎನ್‌ಟಿಎ ಅಧ್ಯಕ್ಷರು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಕರ್ನಾಟಕದಲ್ಲಿ ಸ್ಥಳೀಯವಾಗಿ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಇತ್ತು. ಸ್ಥಳೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ ಇನ್ನಿತರೆ ಸೀಟು ಹಂಚಿಕೆ ಗರಿಷ್ಠ ಪ್ರಮಾಣದಲ್ಲಿತ್ತು. ಆದರೆ ಕೇಂದ್ರ ಮಟ್ಟದ ಪರೀಕ್ಷೆಗಳಿಂದಾಗಿ ಕರ್ನಾಟಕ, ತಮಿಳುನಾಡು ರಾಜ್ಯಗಳ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಕಚ್ಚಾ ತೈಲದ ಬೆಲೆ ಮಾರುಕಟ್ಟೆಯಲ್ಲಿ ಇಳಿದಾಗೆಲ್ಲ ಯುಪಿಎ ಸರ್ಕಾರ ಸಾರ್ವಜನಿಕರ ಹೊರೆ ತಗ್ಗಿಸಿತ್ತು. 2024ರಲ್ಲಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇಂದು ಏರಿಕೆಯಾಗಿದೆ. ಎಲ್‌ಪಿಜಿ ದರ ಕೂಡ ಎರಡು ಪಟ್ಟು ಹೆಚ್ಚಿದೆ. ಕೇಂದ್ರ ಸರ್ಕಾರ, ತೈಲ ಕಂಪನಿಗಳ ಮೇಲಿನ ಆರ್ಥಿಕ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರುತ್ತಿದೆ. ಬೆಲೆಏರಿಕೆಯಿಂದ ಜನರು ತತ್ತರಿಸದಿರಲು ಕ್ರಿಯಾಯೋಜನೆಯನ್ನೂ ರೂಪಿಸಲಿಲ್ಲ ಎಂದು ಹೇಳಿದರು.
ದೇಶದಲ್ಲಿ ನಿರುದ್ಯೋಗ, ಹಣದುಬ್ಬರ, ವಸತಿ ಸಮಸ್ಯೆ ನೀಗಲು ಗಮನ ನೀಡುವ ಬದಲಾಗಿ ಬಿಜೆಪಿ ಕೋಮು ವಿಚಾರಗಳಲ್ಲಿ ಜನರ ದಿಕ್ಕು ಬದಲಾಯಿಸಲು ಹೊರಟಿದೆ. ಹೀಗಾಗಿ ದೇಶದ ಜನರು ನಿಮ್ಮ ಪರ ಹಾಗೂ ವಿರೋಧ ಇರುವವರನ್ನು ಗುರುತಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಮಿತವ್ಯಯದ ಉಪದೇಶ ಮಾಡುತ್ತಿದ್ದಾರೆ. ಇಂದು ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ಜಿಡಿಪಿ ಪ್ರಮಾಣ ಕೂಡ 5.6ಕ್ಕಿಳಿದಿದೆ. ಪ್ರಧಾನಿ ರಾಜೀನಾಮೆ ನೀಡಬೇಕು ಎಂದರು.
ಭಾರತದಲ್ಲಿ ಕಾಂಗ್ರೆಸ್ ಮಾಡಿದ ಆಸ್ತಿಗಳನ್ನೆಲ್ಲ ಬಿಜೆಪಿ ಮಾರುತ್ತ ಹೊರಟಿದೆ. ದೇಶಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಏನಿಲ್ಲ. ಹಿಂದು-ಮುಸ್ಲಿಂ ಹಾಗೂ ಜಾತಿಗಳ ನಡುವೆ ಒಡಕು ತರುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ. ಮುಖಂಡರಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ತರಕಾರಿ ಚಂದ್ರಪ್ಪ, ಜಾಕಿರ್, ದಾದಾಪೀರ್, ವರುಣ್ ಬೆಣ್ಣೆಹಳ್ಳಿ, ನಲ್ಕುಂದ ಹಾಲೇಶ್, ಮೈನುದ್ದೀನ್, ಮುಜಾಹಿದ್ ಪಾಷಾ, ಮಹ್ಮದ್ ಸಾದಿಕ್, ಅಲಿ ಅಹಮದ್, ಡೋಲಿ ಚಂದ್ರು, ಮಂಜಮ್ಮ, ಮಂಜುಳಮ್ಮ, ಶುಭಮಂಗಳಾ, ಕವಿತಾ, ದಾಕ್ಷಾಯಣಮ್ಮ ಇತರರಿದ್ದರು.