ಜಗಳೂರಿನ ಭರಮಸಮುದ್ರ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಷಂಷೀರ್ ಅಹಮದ್, ಕಲ್ಪನಾ, ಸಾವಿತ್ರಮ್ಮ ಇದ್ದರು. Road
- ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ
- ಭರಮಸಮುದ್ರ ಕೆರೆ ಏರಿ, ತಿಮಲಾಪುರ ಸಂಪರ್ಕ ರಸ್ತೆ ಅಭಿವೃದ್ಧಿ
- ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ
ಜಗಳೂರು: ಭರಮಸಮುದ್ರ ಕೆರೆ ಏರಿ ಮತ್ತು ತಿಮಲಾಪುರ ಸಂಪರ್ಕ ರಸ್ತೆ ಸೇರಿ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಭರಮಸಮುದ್ರ ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ 2.25 ಕೋಟಿ ರೂ. ವೆಚ್ಚದ ಭರಮಸಮುದ್ರ-ಚಿಕ್ಕಮಲ್ಲನಹೊಳೆ ರಸ್ತೆಯವರೆಗೂ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಭರಮಸಮುದ್ರ ಗ್ರಾಮದ ಕೆರೆ ಕೈ ಬಿಡಲಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಯೋಜನೆಗೆ ಸಂಬಂಧಿಸಿದ ಇಂಜಿನಿಯರ್, ಗುತ್ತಿಗೆದಾರನ ಗಮನಕ್ಕೆ ತಂದು ಸೇರ್ಪಡೆ ಮಾಡಿದ್ದರಿಂದ ಸತತ 2 ವರ್ಷಗಳಿಂದಲೂ ಕೆರೆ ಕೋಡಿ ಬಿದ್ದಿದೆ ಎಂದರು.
ಕೆರೆ ತುಂಬಿದ್ದರಿಂದ ಕೋಡಿ ಮತ್ತು ಏರಿ ಕೆಲ ಭಾಗಗಳಲ್ಲಿ ಬಿರುಕು ಕಾಣಿಸಿಕೊಂಡು ನೀರು ಸೋರಿಕೆಯಾಗಿದೆ. ತಿಮಲಾಪುರ ಗ್ರಾಮದ ಸಂಪರ್ಕ ರಸ್ತೆ ಹಾಳಾಗಿ ಜನರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರ ತೆರವುಗೊಳಿಸಿ 16 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆ ಅಧ್ಯಕ್ಷ ಷಂಷೀರ್ ಅಹಮದ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ, ಸಾವಿತ್ರಮ್ಮ, ಪಿಡಬ್ಲ್ಯುಡಿ ಎಇಇ ನಾಗರಾಜ್, ಎಇ ಪುರುಷೋತ್ತಮ, ಸಿಡಿಪಿಇಒ ಬೀರೇಂದ್ರಕುಮಾರ್, ಪಪಂ ಮಾಜಿ ಸದಸ್ಯ ಆದರ್ಶ, ಬರ್ಕತ್ ಅಲಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಅಜ್ಜಯ್ಯ ನಾಡಿಗರ್, ಅಶೋಕ್ ರೆಡ್ಡಿ, ಫರ್ವೀಜ್, ಗುತ್ತಿಗೆದಾರ ದೀಪಕ್ ಪಾಟೀಲ್, ಬಿ.ಮಹೇಶ್ವರಪ್ಪ, ಶೇಖರಪ್ಪ ಪಲ್ಲಾಗಟ್ಟೆ, ಮಧು ಗುಬ್ಬಿ, ಮಹಮದ್ ಗೌಸ್ ಇತರರಿದ್ದರು.