ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಬಲ್
- ಮಾಸಾಂತ್ಯದೊಳಗೆ ಜಿಲ್ಲಾಧ್ಯಕ್ಷರ ಪ್ರಕಟ
- 1300 ಜನರ ಅಭಿಪ್ರಾಯ ಸಂಗ್ರಹ
- ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಬಲ್ ಮಾಹಿತಿ
ದಾವಣಗೆರೆ: ಪಕ್ಷದ ಸೂಚನೆಯಂತೆ ಸಂಘಟನಾ ಸೃಜನಾ ಅಭಿಯಾನ ಪ್ರಕ್ರಿಯೆಯಡಿ ಜಿಲ್ಲೆಯಾದ್ಯಂತ ಕಾರ್ಯಕರ್ತರು, ಪದಾಧಿಕಾರಿಗಳ ಅಭಿಪ್ರಾಯ ಕಲೆ ಹಾಕಲಾಗಿದೆ. ಇದರ ವಿಸ್ತೃತ ವರದಿಯನ್ನು ಶೀಘ್ರವೇ ಎಐಸಿಸಿಗೆ ಸಲ್ಲಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಬಲ್ ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದಂತೆ ಸಂಘಟನಾ ಸೃಜನಾ ಅಭಿಯಾನದಡಿ ಜಿಲ್ಲಾಧ್ಯಕ್ಷರ ಹೊಸ ನೇಮಕ ಸಂಬಂಧ ಪ್ರಕ್ರಿಯೆ ನಡೆಸಲಾಗಿದೆ. ಐದು ಜನರುಳ್ಳ ಸಮಿತಿಯು ಕಳೆದ ಏಳು ದಿನಗಳಲ್ಲಿ ಸುಮಾರು 1300 ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು, ಹಿರಿಯರ ನಾಯಕತ್ವದ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲ ಬ್ಲಾಕ್, ಮಂಡಲ, ಪಂಚಾಯಿತಿವಾರು ಅನಿಸಿಕೆ ಸಂಗ್ರಹಿಸಲಾಗಿದೆ. ಗ್ಯಾರಂಟಿ ಸಮಿತಿ ಪದಾಧಿಕಾರಿಗಳು, ಸಾಮಾಜಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳ ಮೂಲಕ ಪಕ್ಷದ ಸಂಘಟನೆ ಬಲಪಡಿಸುವ ಸಂಬಂಧ ಸಲಹೆ ಪಡೆಯಲಾಗಿದೆ. ಇದೆಲ್ಲದರ ಬಗ್ಗೆಯೂ ಪಕ್ಷಕ್ಕೆ ಸಲಹೆ ನೀಡಲಾಗುವುದು ಎಂದು ತಿಳಿಸಿದರು.
15ರಿಂದ 20 ಮಂದಿ ಅರ್ಜಿ ಸಲ್ಲಿಕೆ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ 15ರಿಂದ 20 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮಾಸಾಂತ್ಯದೊಳಗೆ ಎಐಸಿಸಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡು ಜಿಲ್ಲಾಧ್ಯಕ್ಷರನ್ನು ಪ್ರಕಟಗೊಳಿಸಲಿದೆ. ಇತರೆ ರಾಜ್ಯಗಳಲ್ಲಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡವರಿಗೆ ಸಂಘಟನೆ ಕುರಿತಂತೆ 10 ದಿನಗಳ ಸನಿವಾಸ ತರಬೇತಿ ನಿಡಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷರ ನೇಮಕ ಆಂತರಿಕ ಕಾರ್ಯಕ್ರಮವಾಗಿದೆ. ಅರ್ಜಿದಾರರ ಪಕ್ಷನಿಷ್ಠೆ, ಸೈದ್ಧಾಂತಿಕ ಹೊಂದಾಣಿಕೆ, ಪಕ್ಷದಲ್ಲಿ ಸಲ್ಲಿಸಿದ ಸೇವಾವಧಿ, ಯುವ ಕಾಂಗ್ರೆಸ್-ಎನ್‌ಎಸ್‌ಯುಐ ಘಟಕಕ್ಕೆ ಕೊಡುಗೆ, ಅವರ ರಾಜಕೀಯ ಜೀವನ, ಅವರ ವಿರುದ್ಧದ ಪ್ರಕರಣಗಳು, ಸ್ಥಳೀಯ ಜಾತಿ ಸಮೀಕರಣ, ಕಾರ್ಯಕರ್ತರ ಬಗ್ಗೆ ಹೊಂದಿರುವ ವಿಶ್ವಾಸ ಎಲ್ಲದರ ಅವಲೋಕನ ನಡೆಯಲಿದೆ ಎಂದು ವಿವರಿಸಿದರು.
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿನ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಸರ್ಕಾರದ ಅನುದಾನ ಬಳಸಲಾಗುತ್ತಿದೆ ಎಂಬ ಆಪಾದನೆ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಅನುದಾನ ಬಳಕೆ ವಿಚಾರ ನಮ್ಮ ಹಂತದಲ್ಲಿ ನಡೆದಿಲ್ಲ. ಸಚಿವ ಸಂಪುಟದಲ್ಲಿ ನಿರ್ಧಾರವಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳನ್ನೇ ಪ್ರಶ್ನಿಸಬೇಕು’ ಎಂದು ಉತ್ತರಿಸಿದರು.
2ನೇ ಸ್ವಾತಂತ್ರೃ ಸಂಗ್ರಾಮದ ಹಾದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು. ಇದು ಇಂದು ನಿನ್ನೆಯ ಆಕ್ರೋಶವಲ್ಲ. ಅನೇಕ ವರ್ಷದಿಂದ ಎದ್ದಿರುವ ಕೂಗಿದು. ಕಾಂಗ್ರೆಸ್ ಧ್ವಜದಡಿ ಯುವಕರು ಸ್ವಾತಂತ್ರೃ ಚಳವಳಿ ಭಾಗಿಯಾಗಿದ್ದರು. ಇದೀಗ ಎರಡನೇ ಹಂತದ ಸ್ವಾತಂತ್ರೃ ಸಂಗ್ರಾಮದತ್ತ ಸಾಗುವಂತಿದೆ.
ಸಂವಿಧಾನದ ಮಾಧ್ಯಮದ ಮೂಲಕ ನಮಗೆ ನೀಡಿದ ಅಧಿಕಾರದ ಹರಣ ಮಾಡುವ ಪ್ರಯತ್ನ ನಡೆದಿದೆ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಸಂಸದರನ್ನು ಖರೀದಿ ಯತ್ನದ ಮೂಲಕ ಪ್ರಜಾಪ್ರಭುತ್ವ ಕೊಲ್ಲುವ ಷಡ್ಯಂತ್ರಗಳು ನಡೆದವು. ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆ ನಡೆದುಬಂದಿದೆ ಎಂದೂ ವಿಷಾದಿಸಿದರು.
ಕರ್ನಾಟಕದಲ್ಲಿ ಕೆಪಿಎಸ್ಸಿ ಹಗರಣ ಸಂಬಂಧ ಕಾನೂನುಕ್ರಮಕ್ಕೆ ವಿಳಂಬವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ‘ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಒಂದು ತಿಂಗಳಷ್ಟೇ ಕಳೆದಿದೆ. ಈ ವಿಚಾರವಾಗಿ ಅವರು ಬಿಗಿ ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದರು.
ಸಮಿತಿ ಸದಸ್ಯೆ, ಅನಿತಾಕುಮಾರಿ ಮಾತನಾಡಿ ಮಹಿಳೆಯರಿಗೆ ಮೀಸಲಾತಿ ಅಡಿ ಹೆಚ್ಚು ಅಧಿಕಾರ ಕಲ್ಪಿಸುವಂತೆಯೂ ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಇದ್ದರು.