ಬಸವಾಪಟ್ಟಣ: ಜಿಲ್ಲೆಯಾದ್ಯಂತ ಕೆರೆಕಟ್ಟೆಗಳ ಹೂಳು ತೆಗೆಸುವ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳು ಅನುಷ್ಠಾನಗೊಳ್ಳಬೇಕು ಎಂದು ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಹೇಳಿದರು. ಕಶೆಟ್ಟಿಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಡಳಿತ, ಅಭಿವೃದ್ಧಿಯ ಕುರಿತು ಚರ್ಚಿಸುವಾಗ ಹಣಕಾಸಿನ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ನೀರಿನ ಸಂಗ್ರಹ ಹೆಚ್ಚಿಸುವುದು, ಮಣ್ಣಿನ ಆರೋಗ್ಯ ಕಾಪಾಡುವುದು ಹಾಗೂ ಅರಣ್ಯ ಸಂರಕ್ಷಣೆಗೆ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಜಿಲ್ಲಾಡಳಿತದ ಪ್ರಮುಖ ಜವಾಬ್ದಾರಿಯಾಗಿದೆ ಎಂದರು. ಮಳೆಗಾಲದಲ್ಲಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವವನ್ನು ಕೊಂಚ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲೆಯ ಕೆರೆ-ಕಟ್ಟೆಗಳ ಹೂಳು ತೆಗೆಸಿ ಜಲಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸೂಳೆಕೆರೆ, ದೇವರಬೆಳಕೆರೆ ಪಿಕಪ್ ಹಾಗೂ ಭದ್ರಾ ನಾಲೆಗಳು ಜಿಲ್ಲೆಯ ಪ್ರಮುಖ ನೀರಾವರಿ ಮೂಲಗಳಾಗಿವೆ. ಇವುಗಳ ಹರಿವಿಗೆ ಅಡ್ಡಿಯಾಗಿರುವ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಗೆ ದೀರ್ಘಕಾಲೀನ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ರೈತ ಮುಖಂಡರಾದ ಮುದುಗೂರು ಲೋಕೇಶಪ್ಪ, ಚಂದ್ರ ನಾಯಕ್, ವಸಂತ ಕುಮಾರ್, ರಾಮಸ್ವಾಮಿ, ಎ.ಕೆ. ಶಿವಣ್ಣ, ವಿಶ್ವನಾಥ್ ಇತರರು ಇದ್ದರು.
ಭದ್ರಾ ಮತ್ತು ಸೂಳೆಕೆರೆ ನಾಲೆಗಳಲ್ಲಿ ನೀರು ಹರಿಸುವಂತೆ ಹೋರಾಟ ನಡೆಸದಿದ್ದರೆ ರೈತರ ತೋಟಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿದ್ದವು. ಆಗ ಬದುಕು ಕಟ್ಟಿಕೊಳ್ಳಲು ರೈತರು ಗುಳೆ ಹೋಗಬೇಕಿತ್ತು ಎಂದು ಕತ್ತಲಗೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಾರುದ್ರಯ್ಯ ಆತಂಕ ವ್ಯಕ್ತಪಡಿಸಿದರು. ಹೋರಾಟದ ಲವಾಗಿ ತೋಟಗಳಿಗೆ ನೀರು ದೊರೆಯುವಂತಾಗಿದೆ. ಹೋರಾಟದ ಮಹತ್ವವನ್ನು ರೈತರು ಮರೆಯಬಾರದು ಎಂದು ಹೇಳಿದರು.