ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್‌ರಾವ್ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದರು. ಡಾ.ಎಚ್.ಬಿ. ಮಂಜುನಾಥ್, ರೇಣುಕಾ, ಅರ್ಪಿತಾ, ಶಿವಕುಮಾರ್, ಮಹೇಶ್, ಎನ್.ಕೆ. ಕೊಟ್ರೇಶ್ ಇತರರಿದ್ದರು.
- ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್‌ರಾವ್ ಕಿವಿಮಾತು
- ದಾವಣಗೆರೆ ನಗರದಲ್ಲಿ ಬೈಸಿಕಲ್ ಜಾಥಾಕ್ಕೆ ಚಾಲನೆ
- ಇಂಧನ ಉಳಿತಾಯದ ಸಾಧನ- ಎಚ್.ಬಿ.ಮಂಜುನಾಥ್
ದಾವಣಗೆರೆ: ಆರೋಗ್ಯ ದೃಷ್ಟಿಯಿಂದ ವಿದ್ಯಾರ್ಥಿ, ಯುವಜನರು ಹೆಚ್ಚಾಗಿ ಸೈಕಲ್ ಬಳಸಬೇಕು ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್‌ರಾವ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್, ಹಿಮಾಲಯನ್ ಅಡ್ವೆಂಚರ್ ಆ್ಯಂಡ್ ನೇಚರ್ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ತಾವು ಸಹ ಸೈಕಲ್ ಬಳಸಿ, ನಿತ್ಯ ಸುಮಾರು 11 ಕಿ.ಮೀ. ದೂರದವರೆಗೆ ಹೋಗಿ ಬರುತ್ತಿದ್ದೆವು ಎಂದ ಅವರು ನಿತ್ಯ ಜೀವನದಲ್ಲಿ ಸೈಕಲ್ ಅವಲಂಬಿಸಿದರೆ ನಾನಾ ಉಪಯೋಗಗಳಿವೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಪರಿಸರವಾದಿ ಡಾ.ಎಚ್.ಬಿ. ಮಂಜುನಾಥ್ ಮಾತನಾಡಿ ಸೈಕಲ್ ಬಳಸುವುದರಿಂದ ದೈಹಿಕ ಆರೋಗ್ಯ, ಇಂಧನ ಉಳಿತಾಯದಿಂದ ರಾಷ್ಟ್ರದ ಹಿತ ಸಾಧ್ಯವಿದೆ. ವಾಯು ಮತ್ತು ಶಬ್ಧಮಾಲಿನ್ಯ ನಿಯಂತ್ರಣದಿಂದ ಪರಿಸರ ಸಂರಕ್ಷಣೆ ಸಾಧ್ಯವಿದೆ. ಸೈಕಲ್ ಬಳಸಿದರೆ ಸಮಯ ವ್ಯರ್ಥವಾಗಲಿದೆ ಎಂಬ ಭಾವನೆ ತಪ್ಪು, ಸಮಯದ ಸದ್ಬಳಕೆಯ ಅರಿವು ಬರಲಿದೆ ಎಂದರು.
ದೇಶದಲ್ಲಿ ವಾರ್ಷಿಕ 245 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಪೆಟ್ರೋಲಿಯಂ ಬಳಕೆಯಾಗುತ್ತಿದ್ದು ನಿತ್ಯ 6 ಕೋಟಿ ಬ್ಯಾರಲ್ ಪೆಟ್ರೋಲಿಯಂ ಖರ್ಚಾಗುತ್ತಿದೆ. ಇದರಲ್ಲಿ ದ್ವಿಚಕ್ರವಾಹನಗಳಿಂದಲೇ ಶೇ. 62ರಷ್ಟು ಪೆಟ್ರೋಲ್ ಬಳಕೆ ಆಗುತ್ತಿದೆ. ವಾರಕ್ಕೊಮ್ಮೆ ಬೈಕ್ ಬದಲು ಸೈಕಲ್ ಬಳಸಿದರೆ ವಾರ್ಷಿಕ 320 ಕೋಟಿ ಬ್ಯಾರಲ್ ಪೆಟ್ರೋಲ್ ಉಳಿಸಬಹುದು ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ, ಕಚೇರಿ ಅಧೀಕ್ಷಕಿ ಅರ್ಪಿತಾ, ನಿವೃತ್ತ ನ್ಯಾಯಾಧೀಶ ಶಿವಕುಮಾರ್, ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಮಹೇಶ್, ಸದಸ್ಯ ಕಿರಣ್ ಬಾಳೆಹೊಲದ, ಪ್ರಸಾದ್, ಹಿಮಾಲಯನ್ ಅಡ್ವೆಂಚರ್ ಆ್ಯಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್.ಕೆ. ಕೊಟ್ರೇಶ್, ಸದಸ್ಯರಾದ ಚಂದ್ರಮೌಳಿ, ಮಧುಸೂದನ್, ಚನ್ನಬಸವ ಶೀಲವಂತ್, ಖೋಖೋ ತರಬೇತುದಾರ ಜೆ.ರಾಮಲಿಂಗಪ್ಪ, ಬ್ರಿಜೇಜ್, ಪರೀಕ್ಷಿತ್, ಮಹ್ಮದ್ ಪಾಷಾ, ಅಶೋಕ್, ಪರಶುರಾಂ ಇತರರಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ, ಬಾಪೂಜಿ ಆಸ್ಪತ್ರೆ, ದಂತ ವೈದ್ಯಕೀಯ ಕಾಲೇಜು ರಸ್ತೆ, ಕುವೆಂಪು ಭವನ ರಸ್ತೆ, ವಿದ್ಯಾನಗರ, ಹದಡಿ ರಸ್ತೆ, ವಿದ್ಯಾರ್ಥೀಭವನ ವೃತ್ತ, ಜಿಲ್ಲಾಸ್ಪತ್ರೆ ರಸ್ತೆ, ಗುಂಡಿ ಮಹದೇವಪ್ಪ ಛತ್ರದ ಮೂಲಕ ಮತ್ತೆ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಅಂತ್ಯಗೊಂಡಿತು.