ಮೂಲವೇತನದ ಜತೆಗೆ ವ್ಯತ್ಯಾಸದ ತುಟ್ಟಿಭತ್ಯೆ (ವಿಡಿಎ) ಸೇರಿಸಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಸ್ಟೆಲ್‌ಗಳ ಹೊರಗುತ್ತಿಗೆ ಕಾರ್ಮಿಕರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ನಿಂಗರಾಜು, ರವಿನಾಯ್ಕ, ಮನೋಹರ್, ಸರೋಜಮ್ಮ ಇತರರಿದ್ದರು.  
ದಾವಣಗೆರೆ

ವಿಡಿಎ ಸೇರಿಸಿ ಮೂಲವೇತನ ನೀಡಲು ಆಗ್ರಹ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗೆ ಹಾಸ್ಟೆಲ್ ಕಾರ್ಮಿಕರ ಮನವಿ
  • ಕಾನೂನುಬದ್ಧ ಸೌಲಭ್ಯಗಳನ್ನೂ ಕಲ್ಪಿಸಬೇಕು
  • ಜಿಲ್ಲಾಧಿಕಾರಿ ಗಂಗಾಧರಸ್ವಾಮಿಗೆ ಮನವಿ ಸಲ್ಲಿಕೆ
ದಾವಣಗೆರೆ: ಪರಿಷ್ಕೃತ ವೇತನ ಆದೇಶ ಪ್ರಕಟಿತ ದಿನದಂದಲೇ ಮೂಲವೇತನದ ಜತೆಗೆ ವ್ಯತ್ಯಾಸದ ತುಟ್ಟಿಭತ್ಯೆ (ವಿಡಿಎ) ಸೇರಿಸಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಹಾಸ್ಟೆಲ್‌ಗಳ ಹೊರಗುತ್ತಿಗೆ ಆಧಾರಿತ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮಾಜ ಕಲ್ಯಾಣ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಡಿ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರ, 81 ನಿಗದಿತ ಉದ್ಯೋಗಕ್ಕೆ ಸಂಬಂಧಿಸಿದಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಂತಿಮ ಕ್ರೋಢಿಕೃತ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ವಿವಿಧ ಇಲಾಖೆಯ ಹಾಸ್ಟೆಲ್ ಕಾರ್ಮಿಕರೂ ಒಳಗೊಂಡಿದ್ದು, ವೇತನ ಶ್ರೇಣಿಯನ್ನು ಕೂಡಲೆ ಅನುಷ್ಠಾನಗೊಳಿಸಲು ಮನವಿ ಮಾಡಲಾಯಿತು.
ಸರ್ಕಾರವು ವೇತನ ಸಂಹಿತೆ 2019ರ ಚೌಕಟ್ಟಿನಡಿಯಲ್ಲಿ ಎಲ್ಲಾ ನಿಗದಿತ ಉದ್ಯೋಗಗಳಿಗೂ ಆನ್ವಯವಾಗುವಂತೆ ಏಕರೂಪದ ಕೌಶಲಾಧಾರಿತ ವೇತನ ಶ್ರೇಣಿ ಅಳವಡಿಸಿಕೊಂಡಿದೆ. ನಮ್ಮ ಸಂಘದ ಸದಸ್ಯರು ವಲಯ-11 ಹಾಗೂ 111 ರ ವ್ಯಾಪ್ತಿಗೆ ಬರಲಿದ್ದಾರೆ.
ಮುಖ್ಯ ಅಡುಗೆಯವರು ಅತ್ಯಂತ ಕೌಶಲ, ಅಡುಗೆಯವರು ಕೌಶಲ, ಅಡುಗೆ ಸಹಾಯಕರು ಅರೆ ಕೌಶಲ ಹಾಗೂ ಕಾವಲುಗಾರರು ಕೌಶಲ ರಹಿತ ವಲಯದ ವ್ಯಾಪ್ತಿಗೆ ಬರಲಿದ್ದು, ಮೂಲ ವೇತನದ ಜತೆಗೆ ಗ್ರಾಹಕ ಬೆಲೆ ಸೂಚ್ಯಂಕದ 9,469 ಅಂಕಗಳಿಗಿಂತ ಹೆಚ್ಚಿನದಾಗಿದ್ದು ಸರ್ಕಾರವು ವೇರಿಯಬಲ್ ತುಟ್ಟಿಭತ್ಯೆ ಕಡ್ಡಾಯಗೊಳಿಸಿದೆ ಎಂದು ಮುಖಂಡರು ಹೇಳಿದರು.
ಇಪಿಎಫ್, ಇಎಸ್‌ಐ, ಒಟಿ ವೇತನ, ರಾಷ್ಟ್ರೀಯ ಹಬ್ಬದ ರಜೆ ವೇತನ, ಗ್ರಾಚ್ಯುಟಿ ಸೇರಿದಂತೆ ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ಪರಿಷ್ಕೃತ ವೇತನದ ಆಧಾರದ ಮೇಲೆ ಪಾವತಿಸಬೇಕು. ಸರ್ಕಾರದ ಅಧಿಸೂಚನೆಯನ್ನು ತಕ್ಷಣವೇ ಜಾರಿಗೊಳಿಸಿ ಕಾರ್ಮಿಕ ಕಾನೂನು ಉಲ್ಲಂಘನೆ ತಪ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ನಿಂಗರಾಜು, ರವಿನಾಯ್ಕ, ಮನೋಹರ್, ಸರೋಜಮ್ಮ, ಪ್ರಸನ್ನ, ಜ್ಯೋತಿ, ಶಾಂತಕುಮಾರ್ ಇತರರಿದ್ದರು.