- ಪರಿಹಾರ ಕಾಮಗಾರಿ ಆರಂಭಕ್ಕೆ ರೈತರ ಒಕ್ಕೂಟ ಒತ್ತಾಯ
- ಮೋಡ ಬಿತ್ತನೆಗೆ ಸಲಹೆ
ದಾವಣಗೆರೆ : ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ, ಪರಿಹಾರ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗದೆ ರೈತರು ಆಕಾಶ ನೋಡುತ್ತಿದ್ದಾರೆ. ಬಿತ್ತನೆ ಮಾಡಿದ ಬೆಳೆ ಕೂಡ ಒಣಗುತ್ತಿವೆ. ಮೋಡ ಬಿತ್ತನೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್‌ನಿನೋ ಪರಿಣಾಮದಿಂದ ಮಳೆ ಕೊರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ರೈತರು ಭತ್ತ ನಾಟಿ ಮಾಡುವ ಕನಸು ದಿನಕಳೆದಂತೆ ಕಮರುತ್ತಿದೆ. ಮಳೆ ಬರುವ ನಿರೀಕ್ಷೆಯಲ್ಲಿ ಭತ್ತದ ಸಸಿ ಮಡಿ ಮಾಡಿಕೊಂಡು ಕಾಯುವಂತಾಗಿದೆ ಎಂದರು.
ರೈತರ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಆಡಳಿತ ಪಕ್ಷದವರು ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿ ತೊಡಗಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾ ನದಿಯ 17 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯಕ್ಕೆ ಹರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ರೈತ ಮುಖಂಡ ಶಾಮನೂರು ಲಿಂಗರಾಜ ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಚುನಾವಣಾ ತಂತ್ರವಾಗಿ ಬಳಕೆಯಾಗುತ್ತಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ 5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರೆ ತುಂಗಾ ನದಿ ನೀರನ್ನು ಭದ್ರಾ ಜಲಾಶಯಕ್ಕೆ ಹರಿಸಲು ಸಾಧ್ಯವಾಗುತ್ತದೆ. ಯೋಜನೆ ವ್ಯಾಪ್ತಿಯ ಸಂಸದರು ಕೇಂದ್ರದ ಮೇಲೆ ಈ ಬಗ್ಗೆ ಒತ್ತಡ ತರಬೇಕು. ಈ ಕುರಿತು ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಗೋಶಾಲೆ ತೆರೆದು ಮೇವಿನ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
ಎ.ಎಂ. ಮಂಜುನಾಥ್, ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಗುರುನಾಥ್ ಎಚ್.ಎನ್., ಚಂದ್ರಪ್ಪ, ಅಣ್ಣಪ್ಪ, ಮಹೇಶಪ್ಪ, ಕುರ್ಕಿ ರೇವಣಸಿದ್ದಪ್ಪ ಇದ್ದರು.