ಕಾಟಾಚಾರಕ್ಕೆ ಜಯಂತ್ಯುತ್ಸವ ಮಾಡಿದ್ದಾರೆ ಎನ್ನಲಾದ ಹರಿಹರ ತಾಲೂಕಿನ ಕೆಲವು ಗ್ರಾಪಂ ಅಧಿಕಾರಿ, ಸಿಬ್ಬಂದಿ ಅಮಾನತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರಿಗೆ ಮನವಿಪತ್ರ ಸಲ್ಲಿಸಿತು. ಪಿ.ಜೆ. ಮಹಾಂತೇಶ್, ಎಂ.ಎಸ್.ಮಂಜುನಾಥ ಕೊಕ್ಕನೂರು, ಸಿ. ಚೌಡಪ್ಪ ಭಾನುವಳ್ಳಿ, ಲೋಕೇಶ್ ಇತರರಿದ್ದರು.  
ದಾವಣಗೆರೆ

ಗ್ರಾಪಂ ಅಧಿಕಾರಿಗಳ ಅಮಾನತಿಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಕಾಟಾಚಾರದ ಜಯಂತ್ಯುತ್ಸವ ಆಚರಣೆ ಆರೋಪ
  • ಬಾಬು ಜಗಜೀವನರಾಂ ಅವರಿಗೆ ಅಪಮಾನ
  • ಜಿಪಂ ಕಚೇರಿ ಎದುರು ದಸಂಸ ಪ್ರತಿಭಟನೆ
ದಾವಣಗೆರೆ: ಕಾಟಾಚಾರಕ್ಕೆ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವ ಮಾಡಿದ್ದಾರೆ ಎನ್ನಲಾದ ಹರಿಹರ ತಾಲೂಕಿನ ಕೆಲವು ಗ್ರಾಪಂ ಆಡಳಿತಾಧಿಕಾರಿ, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳ ಅಮಾನತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಬಣ) ಹರಿಹರ ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹೊಳೆಸಿರಿಗೆರೆ, ಬೆಳ್ಳೂಡಿ, ಯಲವಟ್ಟಿ, ಕಡಾರನಾಯಕನಹಳ್ಳಿ, ಕುಣೆಬೆಳೆಕೆರೆ, ನಂದಿಗಾವಿ, ಭಾನುವಳ್ಳಿ, ರಾಜನಹಳ್ಳಿ, ಹನಗವಾಡಿ, ಕೊಂಡಜ್ಜಿ, ಉಕ್ಕಡಗಾತ್ರಿ, ಬನ್ನಿಕೋಡು ಗ್ರಾಪಂ ಕಚೇರಿಗಳಲ್ಲಿ ಬೆರಳೆಣಿಕೆಯ ಸಿಬ್ಬಂದಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದು, ಗ್ರಾಪಂ ಪಿಡಿಒ, ಆಡಳಿತಾಧಿಕಾರಿ, ಬಿಲ್ ಕಲೆಕ್ಟರ್,ಇತರೆ ಸಿಬ್ಬಂದಿ ಭಾಗವಹಿಸಿಲ್ಲ.
ಕೆಲವೆಡೆ ಡಾ.ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಹೂವಿನಹಾರ ಹಾಕಿಲ್ಲ. ಪ್ಲಾಸ್ಟಿಕ್ ಹಾರ ಹಾಕಲಾಗಿದೆ. ಕಾಟಾಚಾರಕ್ಕೆ ಕಾರ್ಯಕ್ರಮ ನಡೆಸಿ ಬಾಬು ಜಗಜೀವನರಾಂ ಅವರನ್ನು ಅವಮಾನಿಸಲಾಗಿದೆ. ಸಂಬಂಧಿತ ಗ್ರಾಪಂಗಳ ಆಡಳಿತಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳನ್ನು ನಿಯಮಾನುಸಾರ ಅಮಾನತು ಮಾಡಬೇಕು ಎಂದು ಮುಖಂಡರು ಮನವಿ ಮಾಡಿದರು.
ಸದರಿ ಗ್ರಾಪಂಗಳ ಸಂಬಂಧಿತ ಅಧಿಕಾರಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳು-2021ರ ನಿಯಮ-3 (1)ನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿದ್ದು ಜಿಪಂ ಸಿಇಒ, ತಾಪಂ ಇಒ ಅವರಿಗೆ ದೂರು ನೀಡಿದ್ದೇವೆ. ಜಯಂತ್ಯುತ್ಸವ ಆಚರಣೆಯಲ್ಲಿ ನಿರ್ಲಕ್ಷಿಸಿದ ಅಧಿಕಾರಿ-ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೆ, ಅವರನ್ನು ರಕ್ಷಿಸುವ ಕೆಲಸವಾದಲ್ಲಿ ಜಿಪಂ ಎದುರೇ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಪದಾಧಿಕಾರಿಗಳಾದ ಡಿ. ಮುಗ್ದುಂ, ಎಂ.ಎಸ್.ಮಂಜುನಾಥ ಕೊಕ್ಕನೂರು, ಸಿ. ಚೌಡಪ್ಪ ಭಾನುವಳ್ಳಿ, ಲೋಕೇಶ್, ಹನುಮಂತಪ್ಪ ಪೂಜಾರಿ, ಗುಡದಪ್ಪ ಮಲ್ಲನಾಯಕನಹಳ್ಳಿ. ಅಂಜಿನಪ್ಪ ಕೊಕ್ಕನೂರು, ಮಲ್ಲಪ್ಪ, ರಾಮಣ್ಣ ಹಿಂಡಸಘಟ್ಟ, ಸುಶೀಲಮ್ಮ, ಗುತ್ತ್ಯಮ್ಮ, ದುರುಗಮ್ಮ ಇತರರು ಪಾಲ್ಗೊಂಡಿದ್ದರು.