ದಾವಣಗೆರೆಯ ಶಿವಪ್ಪಯ್ಯ ವೃತ್ತದ ಬಳಿ ಗುರುವಾರ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆರನಹಳ್ಳಿ ರಾಜು, ಜಯಣ್ಣ ಎಸಿಎಂ, ಆರ್. ದಾದಾಪೀರ್, ಆವರಗೆರೆ ಚಂದ್ರು, ಜಿ. ಯಲ್ಲಪ್ಪ, ರಮೇಶ್ ಸಿ. ದಾಸರ, ಸರೋಜಾ, ಪುಷ್ಪಾ, ರೈಡರ್ ರಂಗಸ್ವಾಮಿ, ಸುರೇಶ್ ಮುದಹದಡಿ, ಹನುಮಂತಪ್ಪ ಇದ್ದರು.
- ಶಿವಪ್ಪಯ್ಯ ಸರ್ಕಲ್ ಬಳಿ ಸಿಪಿಐ ಪ್ರತಿಭಟನೆ
- ಪಾಲಿಕೆ ಕಚೇರಿಗೆ ತೆರಳಿ ಮನವಿ
ದಾವಣಗೆರೆ : ನಗರದ ಶಿವಪ್ಪಯ್ಯ ಸರ್ಕಲ್ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರೈಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಮಂಡಳಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.
ಶಿವಪ್ಪಯ್ಯ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೃತ್ತದಲ್ಲಿ ಐದು ರಸ್ತೆಗಳು ಕೂಡುತ್ತಿದ್ದು ನಗರದ ಪ್ರಮುಖ ಸರ್ಕಲ್ಗಳಲ್ಲಿ ಒಂದಾಗಿದೆ. ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಈ ವೃತ್ತದ ಮೂಲಕ ಓಡಾಡುತ್ತಾರೆ. ಕಳೆದ ನಾಲ್ಕು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡಲು ಹಾಗೂ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗಲು ತೊಂದರೆಯಾಗಿದೆ. ಈ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ತಾಲೂಕು ಮಂಡಳಿ ಕಾರ್ಯದರ್ಶಿ ಕೆರನಹಳ್ಳಿ ರಾಜು, ಸಹ ಕಾರ್ಯದರ್ಶಿ ಜಯಣ್ಣ ಎಸಿಎಂ, ಆರ್. ದಾದಾಪೀರ್, ಸಿಪಿಐ ಮುಖಂಡರಾದ ಆವರಗೆರೆ ಚಂದ್ರು, ಜಿ. ಯಲ್ಲಪ್ಪ, ರಮೇಶ್ ಸಿ. ದಾಸರ, ಸರೋಜಾ, ಎ. ತಿಪ್ಪೇಶ್, ಎಚ್. ಮಹೇಶ್, ಎಸ್. ಶೇಖರ ನಾಯಕ, ಐರಣಿ ಚಂದ್ರು, ಪುಷ್ಪಾ, ರೈಡರ್ ರಂಗಸ್ವಾಮಿ, ಸುರೇಶ್ ಮುದಹದಡಿ, ಹನುಮಂತಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.