ಮಾಸಾಶನ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್ ನೇತೃತ್ವದಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ದಾವಣಗೆರೆ ತಾಲೂಕು ಕಚೇರಿ ಎದುರು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ರಾಜ್ಯ ಗೌರವಾಧ್ಯಕ್ಷೆ ಎಂ.ವಿಜಯಲಕ್ಷ್ಮೀ, ಬಿ.ಎಂ. ಶಿವರಾಜು, ಎಸ್.ಆರ್.ರಾಘವೇಂದ್ರ ಇತರರಿದ್ದರು.
- ನಾನಾ ಕಾರಣಕ್ಕೆ ಪಿಂಚಣಿ ಕಡಿತಕ್ಕೆ ಕಿಡಿ
- ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್ ಪ್ರತಿಭಟನೆ
- ತಹಸೀಲ್ದಾರ್ ರಾಜೇಶ್‌ಕುಮಾರ್‌ಗೆ ಮನವಿ ಸಲ್ಲಿಕೆ
ದಾವಣಗೆರೆ: ಕಳೆದ 3-4 ತಿಂಗಳಿಂದ ಸ್ಥಗಿತಗೊಂಡ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಕೂಡಲೇ ಮರುಚಾಲನೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್ ವತಿಯಿಂದ ದಾವಣಗೆರೆ ತಾಲೂಕು ಕಚೇರಿ ಎದುರು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಅಂಗವಿಕಲರು,ಹಿರಿಯ ನಾಗರಿಕರು ಹಾಗೂ ವಿಧವೆಯರ ಮಾಸಾಶನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ದಾವಣಗೆರೆೆ ತಹಸೀಲ್ದಾರ್ ಸಿ. ರಾಜೇಶ್‌ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷೆ ಎಂ.ವಿಜಯಲಕ್ಷ್ಮೀ ಮಾತನಾಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4800 ಹಾಗೂ ತಾಲೂಕಿನಲ್ಲಿ ಸುಮಾರು 12 ಸಾವಿರ ವಿಕಲಾಂಗ ಪಿಂಚಣಿದಾರರಿದ್ದಾರೆ. ಸರ್ಕಾರ ನೀಡುವ ಅಲ್ಪಮೊತ್ತದ ಮಾಸಾಶನದಲ್ಲೇ ಇವರು ಜೀವನ ನಡೆಸುತ್ತಿದ್ದಾರೆ ಎಂದರು.
ಸ್ವಂತ ಮನೆ, ಕೆಲಸ ಹಾಗೂ ಪಾಲಕರಿಲ್ಲದ ಎಷ್ಟೋ ವಿಕಲಾಂಗರಿಗೆ ಈ ಹಣವೇ ಜೀವನಾಧಾರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಧಾರ್ ಜೋಡಣೆ, ನವೀಕರಣ, ಕಡಿಮೆ ಆದಾಯ ಮಿತಿ ಹಾಗೂ ಜೀವಂತ ಇರುವಿಕೆ ಪ್ರಮಾಣಪತ್ರದ ನೆಪದಲ್ಲಿ ವರ್ಷದಲ್ಲಿ 2-3 ಬಾರಿ ಮಾಸಾಶನ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಮಿತಿಯನ್ನು 2 ಲಕ್ಷ ರೂ., 2.25 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಆದರೆ ವಿಕಲಾಂಗರ ಮಾಸಾಶನಕ್ಕೆ 32 ಸಾವಿರ ರೂ. ಆದಾಯ ಮಿತಿ ನಿಗದಿಗೊಳಿಸಿರುವುದು ಅವೈಜ್ಞಾನಿಕವಾಗಿದೆ.
ಮಾಸಾಶನ ಸ್ಥಗಿತದಿಂದಾಗಿ ಜೀವನ ನಡೆಸಲು ಸಾಧ್ಯವಾಗದೆ ಹಲವು ವಿಲಾಂಗರು ಭಿಕ್ಷಾಟನೆ ಮಾಡುವ ಸ್ಥಿತಿ ತಲುಪಿದ್ದಾರೆ. ಹೀಗಾಗಿ ವಿಕಲಾಂಗರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ, ಮುಂದಿನ ತಿಂಗಳಿನಿಂದಲೇ ಮಾಸಾಶನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೊಸದಾಗಿ ಅರ್ಜಿ ಸಲ್ಲಿಸುವವರನ್ನು ಕಚೇರಿಗಳಿಗೆ ಅಲೆದಾಡಿಸದೆ ಶೀಘ್ರ ಕೆಲಸ ಮಾಡಿಕೊಡಬೇಕು ಹಾಗೂ ಜಿಲ್ಲಾಧಿಕಾರಿಗಳ ಜಿಲ್ಲಾ ಸಮಿತಿಯಲ್ಲಿ ವಿಕಲಚೇತನರ ಒಕ್ಕೂಟದ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎಂ. ಶಿವರಾಜು, ಜಿಲ್ಲಾ ಕಾರ್ಯದರ್ಶಿ ಎಸ್.ಆರ್.ರಾಘವೇಂದ್ರ ಹಾಗೂ ವಿಕಲಾಂಗರು, ಹಿರಿಯ ನಾಗರಿಕರು ಇದ್ದರು.