ರೈತರ ತೋಟದಲ್ಲಿ ಹೊಸಪೇಟೆಯಿಂದ ತಂದಿರುವಂತಹ ಗೊಬ್ಬರವನ್ನು ಇಳಿಸುತ್ತಿರುವ ಭಾವಚಿತ್ರ. demand
- ಉತ್ತಮ ಬೆಳೆಯ ಇಳುವರಿಗೆ ನೈಸರ್ಗಿಕ ಪೋಷಕಾಂಶ
- ಹೊಸಪೇಟೆಯಿಂದ ಬರುತ್ತಿರುವ ಗೊಬ್ಬರ ರೈತರ ಅಚ್ಚುಮೆಚ್ಚು
ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ಯಾಗುತ್ತಿರುವ ನಡುವೆಯೇ ರೈತರು ಇದೀಗ ನೈಸರ್ಗಿಕ ಗೊಬ್ಬರಗಳ ಬಳಕೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹೆಚ್ಚಿನದಾಗಿ ಹೊಸಪೇಟೆ ಭಾಗದಿಂದ ಬರುತ್ತಿರುವ ಕುರಿ ಗೊಬ್ಬರಕ್ಕೆ ಅಡಿಕೆ ಬೆಳೆಗಾರರಿಂದ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. demand
ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗೊಬ್ಬರವನ್ನು ಮುಂಗಡವಾಗಿ ಕಾಯ್ದಿರಿಸಿ ಖರೀದಿಸುತ್ತಿದ್ದಾರೆ. 15-20 ಕೆಜಿ ಚೀಲ ಗೊಬ್ಬರಕ್ಕೆ 120-130ರೂ. ಇದೆ. ಬೆಲೆ ಹೆಚ್ಚಾದರೂ ಗುಣಮಟ್ಟ, ಜಮೀನುಗಳಲ್ಲಿ ಉತ್ತಮ ಫಲಿತಾಂಶ ಬಂದಿರುವುದು ರೈತರ ವಿಶ್ವಾಸಕ್ಕೆ ಕಾರಣ. ಕುರಿ ಗೊಬ್ಬರದಲ್ಲಿ ನೈಸರ್ಗಿಕ ಪೋಷಕಾಂಶಗಳಿದ್ದು, ಅಡಿಕೆ ಗಿಡಗಳ ಬೆಳವಣಿಗೆಗೆ ಸಹಕಾರಿ ಎಂಬುದು ರೈತರ ಅಭಿಪ್ರಾಯ. ಒಂದು ಬಾರಿ ಅಡಿಕೆ ಗಿಡಗಳಿಗೆ ಕುರಿ ಗೊಬ್ಬರ ಹಾಕಿದರೆ ಸುಮಾರು 2 ವರ್ಷಗಳವರೆಗೆ ಹೆಚ್ಚುವರಿ ಗೊಬ್ಬರದ ಅವಶ್ಯಕತೆ ಇಲ್ಲ ಎನ್ನಲಾಗುತ್ತದೆ. ಇದರಿಂದ ಅಡಿಕೆ ಗಿಡಗಳು ದಷ್ಟಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತವೆ. ಈಗ ಮಳೆಗಾಲ ಆರಂಭವಾಗಿದ್ದು ರೈತರು ನೈಸರ್ಗಿಕ ಗೊಬ್ಬರದ ಮೊರೆ ಹೋಗುತ್ತಿದ್ದಾರೆ.
"
ರೈತರು ನೈಸರ್ಗಿಕ ಗೊಬ್ಬರ ಕಡೆ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ಕುರಿ ಗೊಬ್ಬರ ಎಂದು ಹೇಳಿ ಮೋಸ ಮಾಡುವವರು ಹೆಚ್ಚಾಗುತ್ತಿದ್ದಾರೆ. ರೈತರು ಖರೀದಿಯ ವೇಳೆ ಜಾಗೃತರಾಗಬೇಕು.
— ಶ್ರೀಕಾಂತ ಸಹಾಯಕ ನಿರ್ದೇಶಕ, ತಾಲೂಕು ತೋಟಗಾರಿಕೆ ಇಲಾಖೆ ಚನ್ನಗಿರಿ.
"
ಹೊಸಪೇಟೆ ಭಾಗದ ಕುರಿ ಗೊಬ್ಬರಕ್ಕೆ ವಿವಿಧ ಭಾಗಗಳಿಂದ ಬೇಡಿಕೆ ಬರುತ್ತಿದೆ. ವಿಶೇಷವಾಗಿ ಅಡಿಕೆ, ತೆಂಗು ಹಾಗೂ ತೋಟಗಾರಿಕಾ ಬೆಳೆಗಳಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಕೊಳ್ಳುತ್ತಿದ್ದಾರೆ.
— ಫಾರೂಕ್ ಗೊಬ್ಬರ ಮಾರಾಟಗಾರ.
"
ಅಡಿಕೆ ಗಿಡಗಳಿಗೆ ಒಮ್ಮೆ ಕುರಿ ಗೊಬ್ಬರ ಹಾಕಿದಲ್ಲಿ ದೀರ್ಘ ಕಾಲದವರೆಗೂ ಪೋಷಕಾಂಶ ಸಿಗಲಿದೆ. ಮಣ್ಣಿನ ತೇವಾಂಶ ಉತ್ತಮವಾಗಿ ಉಳಿಯಲಿದೆ. ಕೃಷಿಗೆ ಈ ಗೊಬ್ಬರ ಸಹಕಾರಿಯಾಗಿದೆ.
— ಶಾಂತರಾಜಪ್ಪ ರೈತ ಸಂಗಾಹಳ್ಳಿ