ದಾವಣಗೆರೆಯಲ್ಲಿ ಶನಿವಾರ, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಗೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಆಲೂರು ನಿಂಗರಾಜ, ಹಾಲೇಶಪ್ಪ, ಎಚ್.ಸಿ. ಗುಡ್ಡಪ್ಪ, ಎ.ಕೆ. ಭುಮೇಶ್, ವೀರೇಶ್ ವಿಭೂತಿ, ರವಿಕುಮಾರ್, ಪಾಂಡೊಮಟ್ಟಿ ಪ್ರಭಾಕರ್, ಕುಬೇರಪ್ಪ, ಪಿ.ಜೆ. ಮಹಾಂತೇಶ್, ಹುಚ್ಚಂಗಿ ಪ್ರಸಾದ್, ದುಗ್ಗೇಶ್ ಇದ್ದರು. 
ದಾವಣಗೆರೆ

ನೇಮಕಾತಿಯಲ್ಲಿ ಒಳಮೀಸಲಾತಿಗೆ ಆಗ್ರಹ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
  • ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ದಾವಣಗೆರೆ : ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಿಸುವಂತೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಆಧಾರಿತವಾಗಿ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು, ಒಳ ಮೀಸಲಾತಿ ಕಾಯ್ದೆಯನ್ನು ಗಾಳಿಗೆ ತೂರಿ 56 ಸಾವಿರ ಹುದ್ದೆಗಳನ್ನು ಒಳ ಮೀಸಲಾತಿ ಇಲ್ಲದೆ ಹಾಗೂ ಕೇವಲ 50ರ ಮೀಸಲಾತಿಯಂತೆ ಹಳೆಯ ರೋಸ್ಟರ್ ಪದ್ಧತಿಯಲ್ಲಿ ತುಂಬುತ್ತಿರುವುದು ದುರಂತ ಎಂದು ಹೇಳಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಶೇ. 6:6:5 ಅನುಪಾತದಂತೆ ಜಾರಿಗೊಳಿಸಲು ಮುಂಬರುವ ಬಜೆಟ್ ಅಧಿವೇಶನದಲ್ಲಿ ಎಲ್ಲ ಸಚಿವರು ಮತ್ತು ಶಾಸಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ನ್ಯಾಯದ ಪರ, ಸಮಾಜವಾದ ಸಿದ್ಧಾಂತದ ಹಿನ್ನೆಲೆಯ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಒಳ ಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳಬಹುದೆಂದು ಯಾರೂ ಭಾವಿಸಿರಲಿಲ್ಲ. ಇದರಿಂದ ದಲಿತರಲ್ಲಿಯೆ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಲು ಆಡಳಿತರೂಢ ಸರ್ಕಾರವೇ ಅವಕಾಶ ಕಲ್ಪಿಸಿದಂತಾಗಿದೆ ಎಂದು ತಿಳಿಸಿದರು.
ಯಾರ ಮುಲಾಜಿಗೆ ಬಗ್ಗದೆ ಸರ್ಕಾರ ಕಾನೂನು ಬದ್ಧವಾಗಿರುವ ಒಳ ಮೀಸಲಾತಿ ಕಾಯ್ದೆ ಅಡಿಯಲ್ಲಿ 56 ಸಾವಿರ ಹುದ್ದೆಗಳನ್ನು ತುಂಬಬೇಕೆಂದು ಒತ್ತಾಯಿಸಿದರು.
ಮಾದಿಗ ಸಮಾಜದ ಹಿರಿಯ ಮುಖಂಡ ಆಲೂರು ನಿಂಗರಾಜ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಲೇಶಪ್ಪ, ಮುಖಂಡರಾದ ಎಚ್.ಸಿ. ಗುಡ್ಡಪ್ಪ, ಎ.ಕೆ. ಭುಮೇಶ್, ವೀರೇಶ್ ವಿಭೂತಿ, ರವಿಕುಮಾರ್, ಪಾಂಡೊಮಟ್ಟಿ ಪ್ರಭಾಕರ್, ಕುಬೇರಪ್ಪ, ಪಿ.ಜೆ. ಮಹಾಂತೇಶ್, ಹುಚ್ಚಂಗಿ ಪ್ರಸಾದ್, ದುಗ್ಗೇಶ್, ನಿಂಗರಾಜು, ನಾಗರಾಜಪ್ಪ ಎಸ್.ಆರ್, ಗೋವಿಂದಪ್ಪ, ನಿಂಗಪ್ಪ, ಜಿಗಣಿ ಹಾಲೇಶ್, ನರಗನಹಳ್ಳಿ ರಾಮಣ್ಣ, ಕರಿಯಪ್ಪ, ದುರುಗೇಶ್, ಮಹಾಂತೇಶ್, ಎಚ್.ಎಂ. ಗುಡದಯ್ಯ, ಮೂರ್ತಿ, ರಾಘವೇಂದ್ರ ಕಡೆಮನಿ, ಕಡತಿ ಅಂಜಿನಪ್ಪ ಪಾಲ್ಗೊಂಡಿದ್ದರು.