ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಜಗಳೂರಿನಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿತು. ಹುಚ್ಚವ್ವನಹಳ್ಳಿ ಮಂಜುನಾಥ್, ಚಿರಂಜೀವಿ ಸಿಎಂ ಹೊಳೆ ಇದ್ದರು.Support 
ದಾವಣಗೆರೆ

ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ಒತ್ತಾಯ Support

ಧನಂಜಯ ಎಸ್.ಹಕಾರಿ.

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ
  • ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯ
  • ತಹಸೀಲ್ದಾರ್ ಸೈಯದ್ ಕಲೀಂಉಲ್ಲಾಗೆ ಮನವಿ
ಜಗಳೂರು: ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಕಳೆದ ವಾರ ಸಭೆ ನಡೆಸಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಕೇಂದ್ರ ಸರ್ಕಾರದ ಏಜೆನ್ಸಿಗಳ ಮೂಲಕ ಖರೀದಿ ಮಾಡಲು ತೀರ್ಮಾನಿಸಿದೆ. ಕರ್ನಾಟಕ ಮಾರಾಟ ಮಹಾಮಂಡಳಿಯಲ್ಲಿ ಕೇಂದ್ರದ ಏಜೆನ್ಸಿಗಳಿವೆ. ಅವರು ತಕ್ಷಣ ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಖರೀದಿ ಕೇಂದ್ರಗಳಲ್ಲಿ 10.30 ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿ ಮಾಡಲು ಅವಕಾಶವಿದೆ. ಉಳಿದ ಬೆಳೆಯನ್ನು ಯಾರು ಖರೀದಿ ಮಾಡಬೇಕು. ಒಬ್ಬ ರೈತನಿಂದ 70 ರಿಂದ 80 ಕ್ವಿಂಟಾಲ್‌ಗೆ ಸೀಮಿತ ಮಾಡಿದ್ದಾರೆ ಎಂದರು.
200 ಕ್ವಿಂಟಾಲ್ ಬೆಳೆದ ರೈತರು ಏನು ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ, ಪಹಣಿ ವಿತರಿಸಿಲ್ಲ. ಬೆಳೆದ ಮೆಕ್ಕೆಜೋಳ ಬೆಳೆಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಪಹಣಿ ಅವಶ್ಯಕವಾಗಿದೆ. ಇನ್ನು ಕೆಲ ರೈತರು ಸ್ವಂತ ಜಮೀನು ಇಲ್ಲದೆ ಗುತ್ತಿಗೆ ಆಧಾರದ ಮೇರೆಗೆ ಮೆಕ್ಕೆಜೋಳ ಬೆಳೆದಿದ್ದಾರೆ, ಪಹಣಿ ಬೇರೆಯವರ ಹೆಸರಿಗೆ ಇರುತ್ತದೆ ಎಂದರು.
ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಕನಿಷ್ಠ ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ 2400 ರೂ.ಗಳನ್ನು ಒಂದು ಕಾಯ್ದೆಯನ್ನಾಗಿ ಮಾಡಿ, 2400 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿದರೆ 2 ವರ್ಷ ಜೈಲು, ಲೈಸೆನ್ಸ್ ರದ್ದು, ಕಡಿಮೆ ಬೆಲೆಗೆ ಖರೀದಿ ಮಾಡಿದ ಮೆಕ್ಕೆಜೋಳಕ್ಕೆ ಅದರ 5 ಪಟ್ಟು ದಂಡ ಹಾಕಿ ಆ ಹಣವನ್ನು ರೈತನ ಖಾತೆಗೆ ಜಮಾ ಮಾಡಬೇಕು. ಈ ರೀತಿ ಕಾಯ್ದೆಯನ್ನು ಜಾರಿಗೆ ತಂದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಜಗಳೂರು ತಾಲೂಕಿನಲ್ಲಿ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಹೆಚ್ಚಾಗಿ ಬೆಳೆಯುತ್ತೇವೆ. ಯಶವಂತಪುರದ ಈರುಳ್ಳಿ ಎಪಿಎಂಸಿ ಮಾರುಕಟ್ಟೆಗೆ ಹೋದಾಗ ಹಿಂದಿನ ದಿನ 3 ಸಾವಿರ ಬೆಲೆಯಾಗಿರುತ್ತದೆ. ಮರು ದಿನ 500 ರೂ. ಆಗಿರುತ್ತದೆ. ಆಗ ಲಾರಿ ಬಾಡಿಗೆಗೂ ಹಣ ಸಾಕಾಗುವುದಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ವಾರದೊಳಗೆ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದೆ. ಹಾಗಾಗಿ ರೈತರು ಒಂದು ವಾರ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ತರದೇ ನಿಲ್ಲಿಸಬೇಕು. ಬೆಂಬಲ ಬೆಲೆ ಸಿಕ್ಕಾಗ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ. ಆಗ ಮಾರುಕಟ್ಟೆಗೆ ರೈತರು ಬಾರದಿದ್ದರೆ ತಕ್ಷಣವೇ ಬೆಲೆ ಏರಿಕೆಯಾಗುತ್ತದೆ ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ಚಿರಂಜೀವಿ ಸಿಎಂ ಹೊಳೆ, ಮುಖಂಡರಾದ ಗೋಪಗೊಂಡನಹಳ್ಳಿ ಸತೀಶ್, ಮಡ್ರಳ್ಳಿ ತಿಪ್ಪಣ್ಣ, ಪರಸಪ್ಪ, ಅನಿಲ್, ಶರಣಪ್ಪ, ಹೊನ್ನೂರ್ ಅಲಿ, ಚೌಡಪ್ಪ, ಗುರುಸಿದ್ದಪ್ಪ, ಪ್ರಕಾಶ್, ಸಹದೇವರೆಡ್ಡಿ ಇತರರಿದ್ದರು.