ದಾವಣಗೆರೆಯಲ್ಲಿ ಗುರುವಾರ ಅರಣ್ಯ ಭೂಮಿ ವರ್ಗೀಕರಣಕ್ಕೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಚ್ಚವ್ವನಹಳ್ಳಿ ಮಂಜುನಾಥ್, ಯೆಲೋದಹಳ್ಳಿ ರವಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ,ಹುಚ್ಚವನಹಳ್ಳಿ ಪ್ರಕಾಶ್, ಹರೀಶ್, ದಯಾನಂದ, ಚಿನ್ನಪ್ಪರ ದಯಾನಂದ, ಜಯನಾಬಿ, ಸಾದಿಕ್, ಜಗಳೂರು ತಿಪ್ಪೇಸ್ವಾಮಿ ಇದ್ದರು. 
ದಾವಣಗೆರೆ

ಅರಣ್ಯ ಭೂಮಿ ವರ್ಗೀಕರಣಕ್ಕೆ ಆಗ್ರಹ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
  • ಡಿಸಿ, ತಸೀಲ್ದಾರ್‌ಗೆ ಮನವಿ ಸಲ್ಲಿಕೆ
ದಾವಣಗೆರೆ : ಕಂದಾಯ ದಾಖಲೆಗಳಲ್ಲಿ ‘ಅರಣ್ಯ’ ಎಂದು ನಮೂದಾಗದಿದ್ದರೂ, ಪಹಣಿಯಲ್ಲಿ ಮಾತ್ರ ‘ಅರಣ್ಯ’ ಎಂದು ತೋರಿಸುತ್ತಿರುವ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ 644 ಎಕರೆ ಜಮೀನನ್ನು ತಕ್ಷಣವೆ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ರೈತರು, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ನಂತರ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಹಾಗೂ ಚನ್ನಗಿರಿ, ಜಗಳೂರು ತಾಲೂಕುಗಳ ಭೂ ವಿವಾದಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಗ್ರಾಮದ ಸರ್ವೆ ನಂಬರ್ 68ರಲ್ಲಿರುವ 644 ಎಕರೆ ಜಮೀನಿನ ಪಹಣಿಯಲ್ಲಿ ಮಾತ್ರ ‘ಅರಣ್ಯ’ ಎಂದು ನಮೂದಾಗಿದೆ. ಉಳಿದಂತೆ ಯಾವುದೆ ಸರ್ಕಾರಿ ದಾಖಲೆಗಳಲ್ಲಿ ಇದು ಅರಣ್ಯ ಭೂಮಿ ಎಂದು ಸಾಬೀತಾಗಿಲ್ಲ ಎಂದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ಈಗಲಾದರೂ ಜಿಲ್ಲಾಡಳಿತವು ಅರಣ್ಯ ಮತ್ತು ಕಂದಾಯ ಭೂಮಿಯ ವರ್ಗೀಕರಣ ಮಾಡಿ, ಈ ಜಮೀನನ್ನು ‘ಹುಲ್ಲು ಬನ್ನಿ ಖರಾಬು’ ಅಥವಾ ‘ಸೇಂದಿವನ’ ಎಂದು ಕಂದಾಯ ಇಲಾಖೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದನ್ವಯ ಜಿಲ್ಲೆಯ ಘೋಷಿತ ಅರಣ್ಯ, ಅರಣ್ಯ ಮತ್ತು ಕಂದಾಯ ಭೂಮಿಗಳನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ನಡುವೆ ಗಡಿ ಗುರುತಿಸುವಿಕೆಯಲ್ಲಿ ಗೊಂದಲ ಉಂಟಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ, ಜಗಳೂರು ತಾಲೂಕು ಚಿಕ್ಕಮ್ಮನಹಳ್ಳಿ, ಗೌಡಗೊಂಡನಹಳ್ಳಿ ಮತ್ತು ಇತರ ಗ್ರಾಮಗಳು. ಚನ್ನಗಿರಿ ತಾಲೂಕು ಅಸ್ತಾಪನಹಳ್ಳಿ, ಕಂಚಿಕೊಪ್ಪದಹಳ್ಳಿ, ಹಾಲೇಶಪುರ ಸೇರಿ ಹಲವು ಗ್ರಾಮಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಗುರುತಿಸಲಾಗಿರುವ ಅನೇಕ ಕೃಷಿ ಭೂಮಿಗಳು ವಾಸ್ತವದಲ್ಲಿ ಕಂದಾಯ ಇಲಾಖೆಗೆ ಸೇರಿವೆ.
ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿರುವ ಇಂತಹ ಜಮೀನುಗಳನ್ನು ಆದಷ್ಟು ಬೇಗ ಕಂದಾಯ ಇಲಾಖೆಗೆ ವಾಪಸ್ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಅರ್ಹ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಕೂಡಲೆ ಮುಕ್ತಗೊಳಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಪಹಣಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ಜಿಲ್ಲಾಡಳಿತ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಚನ್ನಗಿರಿ ತಾಲೂಕು ಅಧ್ಯಕ್ಷ ಯೆಲೋದಹಳ್ಳಿ ರವಿ, ಚಿಕ್ಕಮಲ್ಲನಹೊಳೆ ಚಿರಂಜೀವಿ ,ಹುಚ್ಚವನಹಳ್ಳಿ ಪ್ರಕಾಶ್, ಹರೀಶ್, ದಯಾನಂದ, ಚಿನ್ನಪ್ಪರ ದಯಾನಂದ, ಜಯನಾಬಿ, ಸಾದಿಕ್, ಜಗಳೂರು ತಿಪ್ಪೇಸ್ವಾಮಿ ಭಾಗವಹಿಸಿದ್ದರು.