- ಹೋರಾಟ ರೂಪಿಸಲು ಅರುಣ್ ಕುಮಾರ್ ಸಲಹೆ
- ಸಮಾನ ಮನಸ್ಕರ ವೇದಿಕೆ
ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆಯ ಮೂಲಕ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಇನ್ನೊಂದು ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಮುನ್ನೆಲೆಗೆ ಬಂದಿರುವುದರಿಂದ ಈಗ ನಗರದಲ್ಲಿ ಒಂದು ಸಂಘಟಿತ ಹಾಗೂ ವ್ಯವಸ್ಥಿತ ಹೋರಾಟದ ತುರ್ತು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆ ಭೌಗೋಳಿಕವಾಗಿ ಆಯಕಟ್ಟಿನ ಸ್ಥಳದಲ್ಲಿದ್ದು, ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹಗಲು-ರಾತ್ರಿ ವಿವಿಧ ಬಗೆಯ ರೈಲುಗಳ ಸೌಲಭ್ಯವಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆ ಇದೆ. ಹೈಟೆಕ್ ಬಸ್ ನಿಲ್ದಾಣವಿದೆ.
ಐಜಿಪಿ ಕಚೇರಿ, ಅಭಿಯೋಜನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇರುವುದಲ್ಲದೆ, ನಗರಕ್ಕೆ ಲಗತ್ತಾಗಿ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗ ಶಾಲೆಯೂ ಇದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ನೆರೆಯ ಜಿಲ್ಲೆಯ ಇತರೆ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯ ಪ್ರಕರಣಗಳು ಹೈಕೋರ್ಟಿನಲ್ಲಿವೆ.
ಕಕ್ಷಿದಾರರಿಗೆ ಮತ್ತು ಸಾರ್ವಜನಿಕರಿಗೆ ಮತ್ತೆ ಮತ್ತೆ ಬೆಂಗಳೂರಿಗೆ ಹೋಗಿ ಬರುವುದು ತ್ರಾಸದಾಯಕವೂ ಸಮಯ ಹಾಗೂ ಹಣದ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಎಲ್ಲ ಕಾರಣಗಳಿಂದ ದಾವಣಗೆರೆ ನಗರದಲ್ಲಿ ರಾಜ್ಯ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಸ್ಥಾಪಿಸುವುದು ಅಗತ್ಯ, ಅನಿವಾರ್ಯವೂ ಆಗಿದೆ ಎಂದಿದ್ದಾರೆ.
ಇದೊಂದು ಸಾರ್ವಜನಿಕ ಹಿತಾಸಕ್ತಿಯ ಸಂಗತಿಯಾಗಿದ್ದು ವಾಣಿಜ್ಯ ವ್ಯಾಪಾರಿ ಸಂಘಗಳು, ಕೇಂದ್ರ, ರಾಜ್ಯ, ಬ್ಯಾಂಕಿಂಗ್ ಹಾಗೂ ಖಾಸಗಿ ನೌಕರರ ಸಂಘಟನೆಗಳು, ದಲಿತ, ರೈತ, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳು ಈ ವಿಷಯದಲ್ಲಿ ಧ್ವನಿಗೂಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.