ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಕೊಡುವಂತೆ ಆಗ್ರಹಿಸಿ ಬುಧವಾರ ಜಗಳೂರು ಕಸವನಹಳ್ಳಿ ಗ್ರಾಮದ ಕೂಲಿಕಾರರು ಹನುಮಂತಾಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಜ್ಜಪ್ಪ, ತಿಪ್ಪೇಸ್ವಾಮಿ, ಕಲ್ಲೇಶ್, ಓಬಳೇಶ್, ತಿಪ್ಪೇಸ್ವಾಮಿ, ಗುರುಸ್ವಾಮಿ ಇತರರಿದ್ದರು.Protest 
ದಾವಣಗೆರೆ

ನರೇಗಾದಡಿ ಸಮರ್ಪಕ ಕೆಲಸ ನೀಡಲು ಆಗ್ರಹ Protest

ಶೋಭಾ ಕೃಷ್ಣ ಗೌಡ
ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಕೊಡುವಂತೆ ಆಗ್ರಹಿಸಿ ಬುಧವಾರ ಕಸವನಹಳ್ಳಿ ಗ್ರಾಮದ ಕೂಲಿಕಾರರು ಹನುಮಂತಾಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಸಲಿಕೆ, ಹಾರೆ, ಬುಟ್ಟಿ, ಪಿಕಾಸಿಗಳನ್ನು ಹಿಡಿದ ಮಹಿಳೆ ಮತ್ತು ಪುರುಷ ಕೂಲಿಕಾರರು ಬೆಳಗ್ಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಜತೆಗೆ ನಿರಂತರ ಕೂಲಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಕೆಲಸಕ್ಕಾಗಿ ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ 2004ರಲ್ಲಿ ಅಂದಿನ ಯುಪಿಎ ಸರ್ಕಾರ ನರೇಗಾ ಯೋಜನೆ ರೂಪಿಸಿತ್ತು. ಪರಿಣಾಮ ಗ್ರಾಮೀಣ ಭಾಗದ ಬಡ ಜನತೆಗೆ ಆರ್ಥಿಕ ಅಭಿವೃದ್ಧಿ ಜತೆ ಬದುಕುವ ಭರವಸೆ ಮೂಡಿಸಿತು. ಈಗ ಕಾಲಕ್ರಮೇಣ ಈ ಯೋಜನೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅಧಿಕಾರಿಗಳು, ಕೂಲಿ ಕಾರ್ಮಿಕರಿಗೆ ಸರಿಯಾಗಿ ಕೆಲಸ ಕೊಡದೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನರೇಗಾ ಯೋಜನೆಯ ಅಧಿಕಾರಿ ತಿಪ್ಪೇಸ್ವಾಮಿ, ಕೂಲಿ ಕೆಲಸಕ್ಕೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು. ಕೆಲ ತಾಂತ್ರಿಕ ತೊಂದರೆಯಿಂದ ಜಿಪಿಎಸ್ ತೆಗೆದುಕೊಳ್ಳದ ಕಾರಣ ಎನ್‌ಎಮ್‌ಎಮ್‌ಎಸ್ ಮಾಡಲಾಗಿಲ್ಲ. ಸದ್ಯಕ್ಕೆ ಕೂಲಿ ಕೆಲಸಕ್ಕೆ ಹೋಗಬಹುದು. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಸವನಹಳ್ಳಿ ಗ್ರಾಮದ ಕೂಲಿಕಾರರಾದ ಅಜ್ಜಪ್ಪ, ತಿಪ್ಪೇಸ್ವಾಮಿ, ಕಲ್ಲೇಶ್, ಓಬಳೇಶ್, ತಿಪ್ಪೇಸ್ವಾಮಿ, ಗುರುಸ್ವಾಮಿ, ಅಂಜಿನಪ್ಪ, ಯಲ್ಲಮ್ಮ, ತಿಪ್ಪಕ್ಕ, ಬೋಸಮ್ಮ, ಹಾಲಮ್ಮ, ಹನುಮಕ್ಕ ಸೇರಿ ಮತ್ತಿತರರಿದ್ದರು.

ಕೂಲಿಕಾರರ ಬೇಡಿಕೆಗಳೇನು?

  1. ಕೆಲಸ ಕೇಳಿ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೂ 100 ದಿನದ ಕೆಲಸ ನೀಡಬೇಕು.
  2. ಕೆಲಸದ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು.
  3. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಬೇಕು. ಕೆಲಸ ಮುಗಿದ ಕೂಡಲೇ ಕಾರ್ಮಿಕರನ್ನು ಕಾಯಿಸದೇ ಎನ್‌ಎಮ್‌ಎಮ್‌ಎಸ್ ಹಾಜರಾತಿ ತೆಗೆಯಬೇಕು.
  4. ಉದ್ದೇಶಪೂರ್ವಕವಾಗಿ ಕಾಯಿಸುವ ಕಾಯಕ ಬಂಧುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
  5. ಪ್ರಥಮ ಚಿಕಿತ್ಸೆ ಕಿಟ್ ಇರಬೇಕು.
  6. ಮಕ್ಕಳಿಗೆ ನೆರಳು ಮತ್ತು ಜೋಕಾಲಿ ವ್ಯವಸ್ಥೆ ಒದಗಿಸಬೇಕು.