ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘ ಟ್ರಸ್ಟ್‌ನ ಸಂಸ್ಥಾಪಕ ಮೊಹಮ್ಮದ್ ವಾಸಿಂ ಖಾದ್ರಿ, ಡಿ.ಕೆ. ನಯಾಜ್, ಸಲೀಂ ಜಾವೀದ್, ಫಯಾಜ್ ಅಹ್ಮದ್ ಇದ್ದರು. 
ದಾವಣಗೆರೆ

ಸಾಲಮನ್ನಾ ಹೆಸರಲ್ಲಿ ಸಾರ್ವಜನಿಕರಿಗೆ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಸಿ.ಎಂ. ಶಬಾಜ್‌ಖಾನ್ ವಿರುದ್ಧ ಕ್ರಮವಾಗಲಿ
  • ಯಂಗ್‌ಸ್ಟಾರ್ ಎಂಪವರ್‌ಮೆಂಟ್ ಪಕ್ಷ ವಜಾಗೊಳಿಸಿ
  • ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘದ ಆಗ್ರಹ
ದಾವಣಗೆರೆ: ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ 10 ಲಕ್ಷ ರೂ.ವರೆಗೆ ಜನರು ಪಡೆದಿರುವ ಸಾಲ ಮನ್ನಾ ಮಾಡುವುದಾಗಿ ಹೇಳಿ ಬೆಂಗಳೂರು ಮೂಲದ ಸಿ.ಎಂ. ಶಬಾಜ್‌ಖಾನ್ ವಂಚನೆ ಮಾಡುತ್ತಿರುವುದಾಗಿ ಆರೋಪಿಸಿರುವ ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘ ಟ್ರಸ್ಟ್‌ನ ಸಂಸ್ಥಾಪಕ ಮೊಹಮ್ಮದ್ ವಾಸಿಂ ಖಾದ್ರಿ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಇಲಾಖೆಗೆ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ನೋಂದಣಿಯಾಗದ ಯಂಗ್‌ಸ್ಟಾರ್ ಎಂಪವರ್‌ಮೆಂಟ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂದು ಹೇಳಿಕೊಂಡ ಶಬಾಜ್ ಖಾನ್, ತಮ್ಮ ಸಂಘಟನೆಯಲ್ಲಿ 349 ರೂ. ನೀಡಿ ಸದಸ್ಯತ್ವ ಪಡೆಯಬೇಕು ಎಂದು ಹೇಳಿ ವಂಚಿಸಿದ್ದಾನೆ. ದಾವಣಗೆರೆಯಲ್ಲಿ 3 ಸಾವಿರ, ರಾಜ್ಯಾದ್ಯಂತ ಸುಮಾರು 50 ಸಾವಿರ ಮಂದಿ ಮೋಸ ಹೋಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಕ್ಷದಲ್ಲಿನ ಯಂಗ್‌ಸ್ಟಾರ್ ಗ್ಯಾರಂಟಿ ಯೋಜನೆಯಡಿ ಡೆಬ್ಟ್ ಫ್ರೀ ಇಂಡಿಯಾ ಮೂಲಕ ಸಾಲ ಮನ್ನಾ ಮಾಡಿಸುವುದಾಗಿ ಹೇಳಿ ನಂಬಿಸಿದ್ದಾನೆ. ಹಣ ನೀಡಿ ಅರ್ಜಿ ಭರ್ತಿ ಮಾಡಿ ಸದಸ್ವತ್ವ ಪಡೆದುಕೊಂಡವರಿಗೆ ಒಂದು ಪ್ರಮಾಣಪತ್ರ ನೀಡಿದ್ದಾನೆ.
ಅಲ್ಲದೆ ಜನರ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಅರ್ಜಿ ನೀಡಿರುವ ಶಬಾಜ್‌ಖಾನ್ ಸಿಎಂ ಕಚೇರಿಯಿಂದ ಇ-ಸಿಎಂ ಮತ್ತು ಇ ಕೋಡ್ ಪಡೆದಿದ್ದಾಗಿ ಹೇಳಿ ನಕಲಿ ದಾಖಲೆ ತೋರಿಸುತ್ತ ಜನರನ್ನು ಮರಳು ಮಾಡುತ್ತಿದ್ದಾನೆ.
ಇದನ್ನು ನಂಬಿದ ಸಾಮಾನ್ಯ ಜನರು, ಅದರಲ್ಲೂ ಮುಸ್ಲಿಂ ಮಹಿಳೆಯರು ಹಣ ಹಾಕಿದ್ದಾರೆ. ಈತ ಮುದ್ರಿಸಿಕೊಂಡ ಪಕ್ಷದ ಜಾಹೀರಾತು ಕರಪತ್ರಗಳನ್ನು ತೋರಿಸಿ ಜನರ ದಾರಿ ತಪ್ಪಿಸುತ್ತಿದ್ದಾನೆ. ಈತನ ವಿಚಾರ ತಿಳಿದು ಪ್ರಶ್ನಿಸಿದವರಿಗೆ ನಿನ್ನ ಮನೆಗೆ ಹುಡುಗರನ್ನು ಬಿಟ್ಟು ಹೊಡೆಸುವುದಾಗಿ ಶೂಟೌಟ್ ಮಾಡಿಸುವುದಾಗಿ ಹೆದರಿಸುತ್ತಿದ್ದಾನೆ.
ಇದೇ ವ್ಯಕ್ತಿ ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲೂ ಯಂಗ್‌ಸ್ಟಾರ್ ಎಂಪವರ್‌ಮೆಂಟ್ ಪಕ್ಷದಿಂದ ಸ್ಪರ್ಧಿಸಿದ್ದು, ಬ್ಯಾಲೆಟ್‌ನಲ್ಲಿ 10ನೇ ನಂಬರ್‌ನಡಿ ಈತನ ಚಿತ್ರ ನಮೂದಾಗಿತ್ತು. ಸ್ಪರ್ಧೆ ವೇಳೆ ಚುನಾವಣಾಧಿಕಾರಿಗೆ ಈತನ ವಿರುದ್ಧ ನಾನು ದೂರು ನೀಡಿದ್ದೆ ಎಂದು ಹೇಳಿದರು.
ಕೂಡಲೆ ಈತನನ್ನು ಬಂಧಿಸಿ ಎಫ್‌ಐಆರ್ ದಾಖಲಿಸಬೇಕು. ಈತನ ಪಕ್ಷವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಎಸ್ಪಿ, ಜಿಲ್ಲಾಧಿಕಾರಿ, ಎಡಿಜಿಪಿ ಎಲ್ಲರಿಗೂ ದೂರು ಸಲ್ಲಿಸಲಿದ್ದೇನೆ. ಸಾರ್ವಜನಿಕರು ಶಬಾಜ್ ಖಾನ್ ಅಥವಾ ಆತನ ಕಡೆಯವರು ಬಂದು ಸದಸ್ಯತ್ವ ಮಾಡಿಸಲು ಹೇಳಿದರೆ ಸುಳ್ಳುಸುದ್ದಿ ನಂಬದೆ ಹತ್ತಿರದ ಠಾಣೆ ಅಥವಾ 112ಗೆ ಕರೆ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಡಿ.ಕೆ. ನಯಾಜ್, ಸಲೀಂ ಜಾವೀದ್, ಫಯಾಜ್ ಅಹ್ಮದ್ ಇತರರಿದ್ದರು.