ಜಗಳೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು. ಕಾನನಕಟ್ಟೆ ತಿಪ್ಪೇಸ್ವಾಮಿ, ಸಿ.ಎಂ. ಹೊಳೆ ಚಿರಂಜೀವಿ, ಬೈರನಾಯಕನಹಳ್ಳಿ ರಾಜು ಇತರರಿದ್ದರು.drought-hit
- ರೈತ ಸಂಘದಿಂದ ಒತ್ತಾಯ, ಪ್ರತಿಭಟನೆ
- ತಹಸೀಲ್ದಾರ್ ಗುರುಬಸವರಾಜ್ ಗೆ ಮನವಿ
ಜಗಳೂರು: ಜಗಳೂರು ತಾಲೂಕು ಬರ ಪೀಡಿತವೆಂದು ಘೋಷಣೆ, ಸಂಪೂರ್ಣ ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ತಮಟೆ ಬಾರಿಸುತ್ತ ಮೆರವಣಿಗೆ ಹೊರಟ ರೈತರು ಮಹಾತ್ಮ ಗಾಂಧಿ ಹಳೇ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರಗಾಲ ಎದುರಾಗಿದೆ. ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಸುವ ತುರ್ತು ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ಬಿತ್ತನೆ ಮಾಡಲಾಗದೆ ಹಾಗೂ ಬಿತ್ತಿದ ಬೆಳೆಗಳು ಒಣಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ರೈತರಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಸುಟ್ಟುಹೋಗಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ ರೈತರಿಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಹೇಳಿದರು.
ಒಣಗಿರುವ ಬೆಳೆಗಳ ಸಮೀಕ್ಷೆ ನಡೆಸಿ, ಪ್ರತಿ ಎಕರೆಗೆ ಕನಿಷ್ಠ 40 ರಿಂದ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ನೀರಿನ ಅಭಾವವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಮತ್ತು ಕೊಳವೆಬಾವಿ ಕೊರೆಸಲು ತುರ್ತು ಅನುದಾನ ಬಿಡುಗಡೆ ಮಾಡಬೇಕು. ಗೋಶಾಲೆಗಳನ್ನು ಸ್ಥಾಪಿಸಿ ಮೇವಿನ ಕೊರತೆ ನೀಗಿಸಬೇಕು. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಬೇಕು ಹಾಗೂ ರೈತರ ಕೃಷಿ ಸಾಲಗಳ ಮರುಪಾವತಿಗೆ ಕಾಲಾವಕಾಶ ನೀಡಿ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಭರಮಸಮುದ್ರ ಗುರುಸಿದ್ದಪ್ಪ, ರೈತ ಸಂಘದ ಹಸಿರು ಸೇನೆ ಅಧ್ಯಕ್ಷ ಕಸವ್ವನಹಳ್ಳಿ ನಾಗರಾಜ್, ಮಡ್ರಳ್ಳಿ ತಿಪ್ಪೇಸ್ವಾಮಿ, ರಂಗಾಪುರ ಅಂಜಿನಪ್ಪ, ಸಹದೇವರೆಡ್ಡಿ, ಬಕ್ಕೇಶ್, ಗೌಡಗೊಂಡನಹಳ್ಳಿ ಸತೀಶ್, ದೇವರ ಮನ್ಮೆಹೇಶ್, ಹುಲಿಕೆರೆ ಮಾರಪ್ಪ ಮತ್ತಿತರರಿದ್ದರು.
ಮೂಲಸೌಕರ್ಯಕ್ಕೆ ಆಗ್ರಹ
ಜಗಳೂರು ತಾಲೂಕು 56 ಸಾವಿರ ಹೆಕ್ಟೇರ್ ಕೃಷಿ ಪ್ರದೇಶ ಹೊಂದಿದ್ದು, ಮಳೆಯನ್ನೇ ಆಶ್ರಯಿಸಿದೆ. ಅಂತರ್ಜಲ ಮಟ್ಟ ತೀರಾ ಕುಸಿದಿರುವುದರಿಂದ ಮತ್ತು ದೊಡ್ಡ ಜಲಮೂಲಗಳ ಕೊರತೆಯಿಂದ ಇದು ಸದಾ ಬರಪೀಡಿತ ಪ್ರದೇಶವಾಗಿದೆ. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿಯಲ್ಲೂ ಜಗಳೂರು ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿದೆ. ಈ ಬಾರಿಯೂ ಸಂಪೂರ್ಣ ಬರ ಆವರಿಸಿದ್ದು, ಸರ್ಕಾರ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ರೈತ ಸಂಘದ ತಾಲೂಕಾಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಆಗ್ರಹಿಸಿದರು.
ಕಲ್ಯಾಣ ಯೋಜನೆ ಸಾಕೆ?
ಸರ್ಕಾರಗಳು ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸಿದರೂ ಅವು ರೈತರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿವೆ ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಟೀಕಿಸಿದರು. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರು ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಸಾಲದ ಹೊರೆ ಹೊರುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ತಾಲೂಕು ಬರಗಾಲಕ್ಕೆ ತುತ್ತಾಗಿದ್ದರೂ ಅಧಿಕಾರಿಗಳು ಜಂಟಿ ಸಮೀಕ್ಷೆ ಮತ್ತು ಪರಿಹಾರ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು
- ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಬೆಳೆನಷ್ಟ ಪರಿಹಾರ ನೀಡಬೇಕು.
- ಶೇಂಗಾ ಬೆಳೆಗೆ ಒಂದು ಎಕರೆಗೆ 40,000 ರೂ., ಸೂರ್ಯಕಾಂತಿ 30,000 ರೂ., ಈರುಳ್ಳಿ ಬೆಳೆಗೆ 50,000 ರೂ., ತೊಗರಿ ಬೆಳೆಗೆ 40,000 ರೂ., ಹತ್ತಿ ಬೆಳೆಗೆ 40,000 ರೂ. ನೀಡಬೇಕು.
- ಕೃಷಿ ಕಾರ್ಮಿಕರು ಗುಳಿ ಹೋಗುವುದನ್ನು ತಪ್ಪಿಸಬೇಕು ಮತ್ತು ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಡಬೇಕು.
ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಕೆರೆಗಳಿಗೆ ನೀರು ಬರುತ್ತಿದೆ. ಆದರೆ ವರುಣನ ಕೃಪೆ ಇಲ್ಲದೆ ಬೆಳೆಗಳು ಬಾಡಿವೆ. ಆದ್ದರಿಂದ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಇಲ್ಲಿನ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ಕಳಿಸಬೇಕು. ಶಾಸಕರು ಕೂಡ ಹೆಚ್ಚಿನ ಜವಾಬ್ದಾರಿವಹಿಸಿ ತಾಲೂಕನ್ನು ಬರಪಟ್ಟಿಗೆ ಸೇರಿಸುವ ಜತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು.
— ಗುರುಸಿದ್ದಪ್ಪ ಭರಮಸಮುದ್ರ, ಜಿಲ್ಲಾ ಉಪಾಧ್ಯಕ್ಷ, ರೈತಸಂಘ