ಚನ್ನಗಿರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಯಲೋದಳ್ಳಿ ರವಿಕುಮಾರ್, ಪ್ರಭಾಕರ್, ಆಂಜನೇಯ, ಪೀರ್ಯನಾಯ್ಕ, ಜ್ಞಾನೇಶ್ ಇತರರಿದ್ದರು. drought
- ರೈತ ಸಂಘದಿಂದ ಬೈಕ್ ರ‌್ಯಾಲಿ, ಪ್ರತಿಭಟನೆ
- ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲವನ್ನು ಸಂಪೂರ್ಣಮನ್ನಾ ಮಾಡಿ
- ತಹಸೀಲ್ದಾರ್ ಎನ್.ಜೆ. ನಾಗರಾಜ್‌ಗೆ ಮನವಿ
ಚನ್ನಗಿರಿ: ಸಕಾಲದಲ್ಲಿ ಮುಂಗಾರು ಮಳೆ ಬಾರದೆ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಚನ್ನಗಿರಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ತಾಲೂಕು ಘಟಕ ಗುರುವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ಪಟ್ಟಣದ ಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸರ್ಕಾರದ ವೈಫಲ್ಯದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ತಾಲೂಕಾಧ್ಯಕ್ಷ ಯಲೋದಳ್ಳಿ ರವಿಕುಮಾರ್ ಮಾತನಾಡಿ, ಸರಿಯಾದ ಸಮಯಕ್ಕೆ ಮಳೆ ಬಾರದೆ ರೈತರು ಬಿತ್ತನೆ ಮಾಡಿದ್ದ ಬೀಜ, ಗೊಬ್ಬರದ ಖರ್ಚು ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಮೊದಲ ಮಳೆ ಬಿದ್ದಾಗ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ರೈತರು ಸಾಲ ಮಾಡಿ ಜಮೀನು ಹದಗೊಳಿಸಿ ಬಿತ್ತನೆ ಮಾಡಿದ್ದರು. ಆದರೆ ಆನಂತರ ಮಳೆ ಬಾರದೆ ಒಣಗುತ್ತಿರುವ ಬೆಳೆಗಳನ್ನು ಕಂಡು ಮುಗಿಲು ನೋಡುವಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬೆಳೆ ನಷ್ಟದಿಂದ ರೈತರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಖಾಸಗಿ ಫೈನಾನ್ಸ್‌ಗಳು ಸಾಲ ವಸೂಲಾತಿಗಾಗಿ ರೈತರ ಮನೆ ಬಾಗಿಲಿಗೆ ಬಂದು ಒತ್ತಾಯ ಮಾಡಬಾರದು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲವನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಗೂ ಮುನ್ನ ರೈತರು ತಾಲೂಕಿನ ನಲ್ಲೂರು ಗ್ರಾಮದ ದುರ್ಗಾಂಬಿಕಾ ದೇವಸ್ಥಾನದಿಂದ ಚನ್ನಗಿರಿ ಪಟ್ಟಣದ ತಾಲೂಕು ಕಚೇರಿಯವರೆಗೆ ಬೈಕ್ ರ‌್ಯಾಲಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಪ್ರಭಾಕರ್, ಆಂಜನೇಯ, ಪೀರ್ಯನಾಯ್ಕ, ಜ್ಞಾನೇಶ್, ಬಸವರಾಜಪ್ಪ, ಗಂಡುಗಲಿ, ಶರಣಮ್ಮ, ಮೂಡಲಗಿರಿಯಪ್ಪ, ಈರಣ್ಣ, ಮಂಜು, ಕುಮಾರ್, ಉಮೇಶ್, ಮರಿಯಪ್ಪ, ಬಸವರಾಜಪ್ಪ, ಹಾಲಪ್ಪ, ನಾಗಣ್ಣ, ಪ್ರಕಾಶ್, ತಿಮ್ಮಪ್ಪ, ಪ್ರಸನ್ನಕುಮಾರ್, ಮಂಜುನಾಥ್, ಹಾಲೇಶಪ್ಪ, ಸುರೇಶ್, ಜಯಮ್ಮ, ಹೇಮಿಬಾಯಿ, ಜರೀನಾ ಇತರರಿದ್ದರು.