ದಾವಣಗೆರೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಭದ್ರಾ ಅಚ್ಚುಕಟ್ಟು ರೈತರ ಸಭೆಯಲ್ಲಿ ಎಸ್.ಎ. ರವೀಂದ್ರನಾಥ್, ಪ್ರೊ.ಸಿ. ನರಸಿಂಹಪ್ಪ, ಬಸವರಾಜ ನಾಯ್ಕ, ಎಚ್.ಆರ್. ಲಿಂಗರಾಜ, ಬೆಳವನೂರು ನಾಗೇಶ್ವರ ರಾವ್, ಶಾನುಭೋಗ ನಾಗರಾಜರಾವ್, ಬಿ.ಎಂ. ಸತೀಶ್, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ್ ಇದ್ದರು. 
ದಾವಣಗೆರೆ

ನಾಲೆಗೆ ನೀರು ಹರಿಸಲು 15ರ ಗಡುವು

ಪ್ರಮುಖ ಮುಖ್ಯಾಂಶಗಳು

  • ಭದ್ರಾ ಅಚ್ಚುಕಟ್ಟು ರೈತರ ಸಭೆ
  • ಸ್ಪಂದನೆ ಸಿಗದಿದ್ದರೆ ಹೋರಾಟದ ಎಚ್ಚರಿಕೆ

ದಾವಣಗೆರೆ : ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 170 ಅಡಿ ತಲುಪುತ್ತಿದ್ದಂತೆ ನಾಲೆಗೆ ನೀರು ಹರಿಸಬೇಕೆಂಬ ಅಚ್ಚುಕಟ್ಟು ರೈತರ ಒತ್ತಡ ಹೆಚ್ಚಾಗಿದ್ದು, ತಮ್ಮ ಬೇಡಿಕೆ ಈಡೇರಲು ಸರ್ಕಾರಕ್ಕೆ ಆ. 15ರ ಗಡುವು ನೀಡಿದ್ದಾರೆ.

ನಗರ ಹೊರ ವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸಭೆ ಸೇರಿದ್ದ ಅಚ್ಚುಕಟ್ಟು ಭಾಗದ ರೈತರು, ಸ್ಪಂದನೆ ಸಿಗದಿದ್ದರೆ ಆ. 16ರಂದು ಮತ್ತೊಮ್ಮೆ ಸೇರಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದರು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ನೀರಾವರಿ ತಜ್ಞ ಪ್ರೊ. ಸಿ. ನರಸಿಂಹಪ್ಪ ಮಾತನಾಡಿ ಬರಗಾಲವಿದೆ, ಡ್ಯಾಮ್‌ನಲ್ಲಿ ನೀರಿದ್ದರೂ ಬಿಡದಿದ್ದರೆ ಅದು ಮಹಾ ಪಾಪ. ಭತ್ತದ ಬೆಳೆಗೆ ನೀರು ಹರಿಸುವುದರಿಂದ 60 ಲಕ್ಷ ಮಾನವ ದಿನಗಳನ್ನು ನೀಡಿದಂತಾಗುತ್ತದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದರು.
ಜಲಾಶಯದಲ್ಲಿ ಈಗ 53 ಟಿಎಂಸಿ ನೀರಿದೆ. ಅದರಲ್ಲಿ 8.5 ಟಿಎಂಸಿ ಡೆಡ್ ಸ್ಟೋರೇಜ್ ಬಿಟ್ಟು ಇನ್ನೂ 45 ಟಿಎಂಸಿ ಸಿಗುತ್ತದೆ. ಅದರಲ್ಲಿ ನಮಗೆ ಬೇಕಿರುವುದು 30 ಟಿಎಂಸಿ ನೀರು. ಇನ್ನೂ ಎರಡು ತಿಂಗಳು ಮಳೆಗಾಲ ಇರುವುದರಿಂದ ಒಳಹರಿವು ಇದ್ದೇ ಇರುತ್ತದೆ. ಬೇಸಿಗೆ ಬೆಳೆಗೂ ನೀರು ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡ್ಯಾಮ್‌ನಲ್ಲಿ 162 ಅಡಿ ನೀರು ಬಂದಾಗಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು, ಇದರಲ್ಲಿ ಅವರ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಬೇಗನೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಭದ್ರಾ ನಮ್ಮ ಜೀವನಾಡಿ. ನೀರು ಕೊಡದಿದ್ದರೆ ಆಹಾರೋತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರ ಈ ವಿಷಯದಲ್ಲಿ ಮೀನಮೇಷ ಮಾಡಬಾರದು ಎಂದರು.
ಮಾಜಿ ಶಾಸಕ ಬಸವರಾಜ ನಾಯಕ ಮಾತನಾಡಿ, ರೈತರ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರದ ಕಿವಿ ಹಿಂಡಬೇಕು ಎಂದರು. ರೈತ ಮುಖಂಡ ಬೆಳವನೂರು ನಾಗೇಶ್ವರ ರಾವ್ ಮಾತನಾಡಿ, ಕುಡಿಯುವ ನೀರಿಗೆ ಬೇಕು ಎಂಬ ನೆಪ ಹೇಳಿಕೊಂಡು ರೈತರ ಹಿತವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಶಾನುಭೋಗ ನಾಗರಾಜರಾವ್ ಮಾತನಾಡಿ, ಜಲಾಶಯದಲ್ಲಿ ನೀರಿದೆ, ಕೊಟ್ಟಿಲ್ಲ. ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದಾರೆ. ನಮಗೆ ಬೇಕಾದ ನೀರು ಪಡೆಯಲು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ನಡೆದುಕೊಳ್ಳೋಣ ಎಂದರು.
ಹರಿಹರ ಭಾಗದ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ, ತುಂಗಾ ಜಲಾಶಯದಿಂದ ಭದ್ರಾ ಡ್ಯಾಮ್‌ಗೆ ನೀರು ಹರಿಸುವ ಯೋಜನೆಗೆ 30 ಕೋಟಿ ರೂ.ಗಳ ಅಗತ್ಯವಿದೆ ಎಂದು ಸಭೆಯ ಗಮನ ಸೆಳೆದರು.
ರೈತ ಮುಖಂಡರಾದ ಬಿ.ಎಂ. ಸತೀಶ್, ಷಣ್ಮುಖಯ್ಯ ಸೇರಿ ದಾವಣಗೆರೆ, ಹರಿಹರ, ಹರಪನಹಳ್ಳಿ ಭಾಗದ ನೂರಾರು ರೈತರು ಪಾಲ್ಗೊಂಡಿದ್ದರು.

ಅಧಿವೇಶನದಲ್ಲಿ ಪ್ರಸ್ತಾಪ

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭದ್ರಾ ಜಲಾಶಯದಿಂದ ನೀರು ಬಿಡಬೇಕು ಎಂಬ ರೈತರ ಬೇಡಿಕೆಯ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲೇ ಹೋರಾಟ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ದಾವಣಗೆರೆ, ಹರಿಹರ, ಹರಪನಹಳ್ಳಿ ಭಾಗದ ರೈತರಿಗೆ ಈ ಬಾರಿ ನೀರು ಕೊಡದಿದ್ದರೆ ಒಟ್ಟು 3 ಬೆಳೆಗಳನ್ನು ಕಳೆದುಕೊಳ್ಳುತ್ತಾರೆ. ಸರ್ಕಾರ ನಿರ್ಲಕ್ಷೃ ಮಾಡದೇ ತಕ್ಷಣ ನೀರು ಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಬರ ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು ಮಾತನಾಡಿ, ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ. ಕೈಗಾರಿಕಾ ಲಾಬಿಗೆ ಮಣಿದಿದೆ. ತುರ್ತಾಗಿ ನಾಲೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ದಾವಣಗೆರೆ ಉತ್ತರ ಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಲೋಕಿಕೆರೆ ನಾಗರಾಜ್ ಮಾತನಾಡಿ, ರೈತರು ಭದ್ರಾ ನೀರಿಗಾಗಿ ಆಗ್ರಹಿಸುತ್ತಿದ್ದರೂ ಸರ್ಕಾರ ಇದುವರೆಗೆ ಒಂದೂ ಸಭೆ ಕರೆದಿಲ್ಲ. ಇನ್ನೂ ವಿಳಂಬವಾದರೆ ಈ ಭಾಗದ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
"

ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡದಿದ್ದರೆ ಆ. 16ರಂದು ಮಧ್ಯಾಹ್ನ 12 ಗಂಟೆಗೆ ಸರ್ಕ್ಯೂಟ್ ಹೌಸ್‌ನಲ್ಲಿ ಮತ್ತೆ ಸಭೆ ಸೇರಿ ಮುಂದಿನ ಹೋರಾಟದ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರೋಣ.

— ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ