ದಾವಣಗೆರೆ ನಗರಸಭೆ ಬಳಿ ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಆಯೋಜಿಸಿದ್ದ ಸರದಿ ಸತ್ಯಾಗ್ರಹ ಶಿಬಿರದಲ್ಲಿ ಭಾಗಿಯಾಗಿದ್ದ ಜನರು.
- 60 ದಿನಗಳ ನಿರಂತರ ನಿರಶನ ಧರಣಿ
- ಸಭಿಕರ ಸೆಳೆದಿದ್ದ ಡಾ.ರಾಜ್‌ಕುಮಾರ್ ಭಾಷಣ
- ವಿವಿಧ ಸಂಘ ಸಂಸ್ಥೆಗಳ ಸಹಕಾರ
ದಾವಣಗೆರೆ: ದಾವಣಗೆರೆ, ಹಲವು ಹೋರಾಟಗಳಿಗೆ ಬಲ ತುಂಬಿದ ನೆಲ. ನಾಡು-ನುಡಿ, ನೆಲ-ಜಲದ ಸಮಸ್ಯೆ ಉದ್ಭವಿಸಿದಾಗೆಲ್ಲ ಕನ್ನಡದ ಡಿಂಡಿಮ ಬಾರಿಸಿದ ನಗರವಿದು. ಅನೇಕ ಕನ್ನಡದ ಕಲಿಗಳು ಚಳವಳಿಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ಗೋಕಾಕ್ ಚಳವಳಿಯಲ್ಲಿ ದಾವಣಗೆರೆ ಪಾತ್ರ ಅದ್ವಿತೀಯ. ಕರ್ನಾಟಕದ ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡದ ಸ್ಥಾನಮಾನ ಕುರಿತಂತೆ ರಾಜ್ಯ ಸರ್ಕಾರ, ಡಾ.ವಿ.ಕೆ.ಗೋಕಾಕರ ಅಧ್ಯಕ್ಷತೆಯ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿ ಅನುಷ್ಠಾನಕ್ಕೆ ಮೀನಮೇಷ ನಡೆಯಿತು. ಇದರಿಂದಾಗಿ ರಾಜ್ಯಾದ್ಯಂತ ಹೋರಾಟ ನಡೆದರೆ ಮಧ್ಯಕರ್ನಾಟಕದಲ್ಲೂ ಪ್ರತಿಧ್ವನಿಸಿತು.
ದಾವಣಗೆರೆಯಲ್ಲಿ ನಿರಂತರ ಸಭೆ, ಮೆರವಣಿಗೆ, ಬಹಿರಂಗ ಸಭೆಗಳು, ಕೇಂದ್ರ ಕನ್ನಡಕ್ರಿಯಾ ಸಮಿತಿಯ ಸಮಾವೇಶಗಳು ನಡೆದವು. ವಿದ್ಯಾರ್ಥಿ ಸಂಘ, ವಕೀಲರು, ಇಂಜಿನಿಯರ್‌ಗಳು, ವರ್ತಕರು, ರೈತರು, ಕಾರ್ಮಿಕರು, ಅಧ್ಯಾಪಕರ ಸಂಘಗಳೂ ಸೇರಿ ಜನರೂ ಕೂಡ ಈ ಆಂದೋಲನದ ಭಾಗವಾದರು.
ಅದು 1982ರ ಸಮಯ. ನಗರದಲ್ಲಿ ಕೆ.ಎಂ. ಜಯದೇವಪ್ಪ ಅಧ್ಯಕ್ಷತೆಯ ಗೋಕಾಕ್ ವರದಿ ಅನುಷ್ಠಾನ ಸಮಿತಿಯಲ್ಲಿ ಪ್ರಮುಖರ ಪಡೆಯೇ ರಚನೆಯಾಗಿತ್ತು. ವರದಿ ಬೆಂಬಲಿಸಿ ದಾವಣಗೆರೆ ನಗರಸಭೆ ಎದುರು ಸರದಿಯಂತೆ ಉಪವಾಸ ಕೈಗೊಂಡಾಗ ಜಾತ್ಯತೀತವಾದ ಸ್ಪಂದನೆ ದೊರಕಿತು. ಎಚ್.ಎಂ.ಸೋಮನಾಥಯ್ಯ, ಟಿ.ಜಿ. ಶಿವಯೋಗಪ್ಪ, ಬಂಕಾಪುರ ಚನ್ನಬಸಪ್ಪ, ಇ. ತಿಪ್ಪೇರುದ್ರಪ್ಪ, ಬಿದರಕುಂದಿ ಸಿದ್ದಲಿಂಗಪ್ಪ, ಐರಣಿ ಬಸವರಾಜ್ ಮೊದಲಾದವರು ಉಪವಾಸದಲ್ಲಿ ಭಾಗಿಯಾಗಿದ್ದರು.
‘ಪಾಟೀಲ ಪುಟ್ಟಪ್ಪ, ಎಂ.ಎಂ.ಕಲಬುರಗಿ, ಚಂಪಾ, ಚಂದ್ರಕಾಂತ ಬೆಲ್ಲದ್ ಅವರನ್ನು ಒಳಗೊಂಡ ಕನ್ನಡ ಕ್ರಿಯಾ ಸಮಿತಿ ಅಲ್ಲಿಂದ ಕರೆ ಕೊಟ್ಟರೆ ದಾವಣಗೆರೆಯಲ್ಲಿ ಅದನ್ನು ಜಾರಿಗೆ ತರುತ್ತಿದ್ದೆವು. ಎಚ್.ಶಿವಪ್ಪ, ಪಂಪಾಪತಿ ಮನೆ ಎದುರೂ ಧರಣಿ ನಡೆಸಿದ್ದೆವು. ಆಗ ಪಂಪಾಪತಿ ಧರಣಿಗೆ ಕೂತವರಿಗಾಗಿ ಶಾಮಿಯಾನ ಹಾಕಿಸಿಕೊಟ್ಟರು. ಶರಬತ್ತು ಮಾಡಿಸಿಕೊಟ್ಟಿದ್ದರು’ ಎಂದು ಸ್ಮರಿಸುತ್ತಾರೆ ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಅವರು.
ನಗರಸಭೆ ಮುಂದೆ ಟೆಂಟ್ ಹಾಕಿ ಧರಣಿ ನಡೆಸುತ್ತಿದ್ದರೆ ಆರಂಭದಲ್ಲಿ ಕಮ್ಯುನಿಸ್ಟರೂ ಉದ್ಘಾಟನೆಗೆ ಹಿಂಜರಿದಿದ್ದರು. ಸತ್ಯಾಗ್ರಹ 40 ದಿನ ತಲುಪುತ್ತಿದ್ದಂತೆ ಶಾಮಿಯಾನದ ಬಾಡಿಗೆ ಹಣವನ್ನು ಸ್ನೇಹಿತರೇ ಸೇರಿ ಕೊಟ್ಟು, ಅಂದನೂರು ಕೊಟ್ರಬಸಪ್ಪ ಅವರ ಜಿನ್‌ನಲ್ಲಿದ್ದ ತಗಡು ತಂದು ಚಪ್ಪರ ಹಾಕಿ ಸತ್ಯಾಗ್ರಹ ಮುಂದುವರಿಸಿದೆವು. 60 ದಿನಗಳ ಕಾಲ ಚಳವಳಿ ನಡೆದಿತ್ತು.
ಮಧ್ಯದಲ್ಲಿ ಚಳವಳಿ ದುರ್ಬಲವಾದಂತೆ ಕಂಡುಬಂದಾಗ ಚಳವಳಿಗಾರರ ಒತ್ತಾಸೆಯಂತೆ ಕನ್ನಡ ಚಿತ್ರರಂಗದ ದಿಗ್ಗಜರು ಗೋಕಾಕ್ ಚಳವಳಿಗೆ ಕಾಲಿಟ್ಟರು. ರಾಜ್ಯಾದ್ಯಂತ ಪ್ರವಾಸ ನಡೆಸಿದರು. ಡಾ. ರಾಜ್‌ಕುಮಾರ್ ಪ್ರವೇಶದಿಂದಾಗಿ ಚಳವಳಿ ಕಾವೇರಿತು.
ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಲಕ್ಷಾಂತರ ಜನರು ಸಮಾವೇಶಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಾ. ರಾಜ್, ಗೋಕಾಕ್ ವರದಿ ಜಾರಿ ಮಾಡದಿದ್ದರೆ ಹೋರಾಟ ಉಗ್ರರೂಪ ತಾಳಲಿದೆ. ನಾವು ತನು-ಮನ, ಸಹಿಸಿ ಎಂಥಹ ತ್ಯಾಗಕ್ಕೂ ಸಿದ್ಧರಿದ್ಧೇವೆ’ ಎಂದು ಪ್ರಕಟಿಸಿದ್ದರು.
ಚಳವಳಿ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನಪ್ರತಿನಿಧಿಗಳ ಕಾರನ್ನು ಚಳವಳಿಗಾರರು ತಡೆಯುತ್ತಿದ್ದರು. ಜೆ.ಎಚ್.ಪಟೇಲರೂ ಕೂಡ ಹಾದು ಹೋಗುತ್ತಿದ್ದಾಗ ಅವರಿಗೂ ಇದರ ಅನುಭವವಾಗಿತ್ತು. ಕೊನೆಗೆ ಅವರು ಕಾರಿಂದ ಇಳಿದು ರೈಲು ತಡೆ ಚಳವಳಿಯಲ್ಲಿ ಭಾಗಿಯಾಗಿ ಒಂದೂಕಾಲು ತಾಸು ನಿರರ್ಗಳವಾಗಿ ಮಾತನಾಡಿದ್ದರು ಎಂದು ಚನ್ನಬಸಪ್ಪ ಅವರು ಸ್ಮರಿಸುತ್ತಾರೆ.
ಗೋಕಾಕ್ ಚಳವಳಿಯಲ್ಲಿ ಬಂಧನಕ್ಕೆ ಒಳಗಾಗಿದ್ದವರ ಪೈಕಿ ಬಿ.ವಿ. ವೀರಭದ್ರಪ್ಪ, ಟಿ.ಜಿ. ಶಿವಯೋಗಪ್ಪ, ಎಂ.ಜಿ.ಈಶ್ವರಪ್ಪ, ಬಾ.ಮ. ಬಸವರಾಜಯ್ಯ ಸೇರಿ 77 ಜನರನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಆಗ ಅಂಗಡಿ ಮುಂಗಟ್ಟು, ಬ್ಯಾಂಕ್, ತರಕಾರಿ ಮಾರುಕಟ್ಟೆ, ಭದ್ರಾ ಕಾರ್ಖಾನೆ ಬಂದ್ ಮಾಡಿ ಹೋರಾಟಗಾರರಿಗೆ ಬೆಂಬಲಿಸಿದವು.
ಸಭೆಯ ತೀರ್ಮಾನದಂತೆ ನಾನು ಮತ್ತು ಪಿ. ಹಾಲೇಶಪ್ಪ ಬಂಧನಕ್ಕೆ ಒಳಗಾಗಲಿಲ್ಲ! ಬಂಧಿತರ ಬಿಡುಗಡೆಗೆ ಪ್ರಯತ್ನ ಮಾಡುತ್ತಿದ್ದೆವು. ಈ ವಿಚಾರದಲ್ಲಿ ಬಕ್ಕಯ್ಯ, ಉರೇಕೊಂಡಿ ಸಿದ್ದಲಿಂಗಪ್ಪ, ಖಮಿತ್ಕರ್ ಯಾವುದೇ ವಕೀಲರೂ ಸಹ ಶುಲ್ಕ ಪಡೆಯುತ್ತಿರಲಿಲ್ಲ ಎಂದೂ ನೆನೆದರು. ಟಕದಲ್ಲಿ ಗೋಕಾಕ್ ಚಳವಳಿ ಕಾವು ಕಡಿಮೆಯಾದಾಗ ಅದರ ತೀವ್ರತೆ ಹೆಚ್ಚು ಮಾಡಿದ್ದೇ ದಾವಣಗೆರೆ. ರಂಗ ಕಲಾವಿದರು, ಮಹಿಳಾ ಸಂಘಟನೆಗಳೂ ಸೇರಿ ಎಲ್ಲ ವರ್ಗದ ಜನರೂ ಸತ್ಯಾಗ್ರಹಕ್ಕೆ ಸ್ಪಂದಿಸಿ ಭಾಗಿಯಾಗಿದ್ದರು. ಡಾ. ರಾಜ್‌ಕುಮಾರ್ ಪ್ರವೇಶ, ಚಳವಳಿಯ ದಿಕ್ಕನ್ನೇ ಬದಲಿಸಿತು.— ಬಂಕಾಪುರ ಚನ್ನಬಸಪ್ಪ. ಕನ್ನಡಪರ ಹೋರಾಟಗಾರ.
ಗೋಕಾಕ್ ಚಳವಳಿಯಲ್ಲಿ ಸರದಿ ಸತ್ಯಾಗ್ರಹ ಶಿಬಿರದಲ್ಲಿ ದಾವಣಗೆರೆಯ ವಿವಿಧ ಸಂಘ-ಸಂಸ್ಥೆಗಳು ನಿಗದಿಪಡಿಸಿದ ದಿನಾಂಕದಂದು ಕೂರುವ ಜತೆಗೆ ಅದರ ವೆಚ್ಚವನ್ನೂ ಭರಿಸುತ್ತಿದ್ದವು. ಇದಕ್ಕಾಗಿ ಹಣದ ಗಡಿಗೆಯನ್ನೂ ಇರಿಸಿದ್ದೆವು. ಸ್ಥಳೀಯ ಪತ್ರಿಕೆಗಳೂ ಕೂಡ ಚಳವಳಿಗೆ ಬೆಂಬಲ ನೀಡಿದ್ದವು. ಬಸವರಾಜ್ ಐರಣಿಕನ್ನಡಪರ ಹೋರಾಟಗಾರ.
ಕರ್ನಾಟಕದಲ್ಲಿ ಗೋಕಾಕ್ ಚಳವಳಿ ಕಾವು ಕಡಿಮೆಯಾದಾಗ ಅದರ ತೀವ್ರತೆ ಹೆಚ್ಚು ಮಾಡಿದ್ದೇ ದಾವಣಗೆರೆ. ರಂಗ ಕಲಾವಿದರು, ಮಹಿಳಾ ಸಂಘಟನೆಗಳೂ ಸೇರಿ ಎಲ್ಲ ವರ್ಗದ ಜನರೂ ಸತ್ಯಾಗ್ರಹಕ್ಕೆ ಸ್ಪಂದಿಸಿ ಭಾಗಿಯಾಗಿದ್ದರು. ಡಾ. ರಾಜ್‌ಕುಮಾರ್ ಪ್ರವೇಶ, ಚಳವಳಿಯ ದಿಕ್ಕನ್ನೇ ಬದಲಿಸಿತು. ಬಂಕಾಪುರ ಚನ್ನಬಸಪ್ಪ, ಕನ್ನಡಪರ ಹೋರಾಟಗಾರ.