ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಿಲಿಂಡರ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿದರು. ಡಿಎಚ್‌ಒ ಡಾ. ಷಣ್ಮುಖಪ್ಪ, ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಪ್ಪ ಮತ್ತು ಸಿಬ್ಬಂದಿ ಇದ್ದರು. 
ದಾವಣಗೆರೆ

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಲಿಂಡರ್ ಸ್ಫೋಟ

ಪ್ರಮುಖ ಮುಖ್ಯಾಂಶಗಳು

  • ಶಸ್ತ್ರಚಿಕಿತ್ಸಾ ವಿಭಾಗ ಬೆಂಕಿಗೆ ಆಹುತಿ
  • ಸುಟ್ಟು ಕರಕಲಾದ ಯಂತ್ರೋಪಕರಣ, ಸಾಮಗ್ರಿ
ದಾವಣಗೆರೆ : ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯ ಕಿವಿ, ಮೂಗು, ಗಂಟಲು (ಇಎನ್‌ಟಿ) ವಿಭಾಗದ ಶಸ್ತ್ರಚಿಕಿತ್ಸಾ ಕೊಠಡಿಯ ವರ್ಕ್ ಸ್ಟೇಷನ್‌ನಲ್ಲಿ ಮಂಗಳವಾರ ಬೆಳಗ್ಗೆ ಸಿಲಿಂಡರ್ ಸ್ಫೋಟ ಸಂಭವಿಸಿ ಬೆಲೆ ಬಾಳುವ ಯಂತ್ರೋಪಕರಣಗಳು, ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ, ಯಾವುದೇ ಪ್ರಾಣಾಪಾಯವಾಗಿಲ್ಲ.
ಆಸ್ಪತ್ರೆಯ 2ನೇ ಮಹಡಿಯಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬೆಳಗ್ಗೆ 9 ಗಂಟೆಗೆ ಶಸ್ತ್ರಚಿಕಿತ್ಸೆ ಆರಂಭವಾಗಬೇಕಿತ್ತು. ಅದಕ್ಕಾಗಿ ಅನಸ್ತೇಷಿಯಾ ವೈದ್ಯರು, ಸ್ಟಾಫ್ ನರ್ಸ್‌ಗಳು ಸೇರಿ 6ರಿಂದ 7 ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅದೃಷ್ಟವಶಾತ್ ರೋಗಿಗಳು ಒಳಗೆ ಇರಲಿಲ್ಲ. 8.45ರ ಸುಮಾರು ವರ್ಕ್ ಸ್ಟೇಷನ್‌ನಲ್ಲಿ ಕಿಡಿ ಕಾಣಿಸಿಕೊಂಡು ಬೆಂಕಿ, ಹೊಗೆ ಆವರಿಸಿದೆ. ಅಪಾಯದ ಮುನ್ಸೂಚನೆ ಅರಿತ ಸಿಬ್ಬಂದಿ ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಕೆಲ ಹೊತ್ತಿನಲ್ಲೇ ಸಿಲಿಂಡರ್‌ಗಳು ಸ್ಫೋಟವಾಗಿವೆ.
ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಆಸ್ಪತ್ರೆ ಕಟ್ಟಡದಿಂದ ದಟ್ಟವಾದ ಹೊಗೆ ಬರತೊಡಗಿತು. 5ನೇ ಸಂಖ್ಯೆಯ ಶಸ್ತ್ರಚಿಕಿತ್ಸಾ ಕೊಠಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಿಟಕಿ ಗಾಜುಗಳು ಪುಡಿಯಾಗಿವೆ. ಈ ಘಟನೆಯಿಂದ ಆತಂಕಗೊಂಡ ಅಕ್ಕಪಕ್ಕದ ವಿಭಾಗದಲ್ಲಿದ್ದ ರೋಗಿಗಳು ಆಸ್ಪತ್ರೆಯಿಂದ ಹೊರಗೆ ಓಡಿ ಬಂದು, ಜೋರಾಗಿ ಕೂಗಿ ಎಲ್ಲರನ್ನೂ ಎಚ್ಚರಿಸಿದ್ದಾರೆ.

ಡಿ-ಗ್ರೂಪ್ ಸಿಬ್ಬಂದಿ ಸಾಹಸ

ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದವರು ಗಾಬರಿಯಿಂದ ಹೊರಗೆ ಓಡಿ ಬಂದು ಬೆಂಕಿ, ಬೆಂಕಿ ಎಂದು ಕೂಗಿದಾಗ ಡಿ-ಗ್ರೂಪ್ ಸಿಬ್ಬಂದಿ ಹಾಗೂ ನರ್ಸ್‌ಗಳು ಜೀವದ ಹಂಗು ತೊರೆದು ಸಾಹಸ ಮೆರೆದರು.
ಡಿ-ಗ್ರೂಪ್ ಸಿಬ್ಬಂದಿ ಕೊಟ್ರೇಶ್, ಪ್ರವೀಣ್, ಅನೂಪ್ ಮುಂತಾದವರು ಅಲ್ಲಿದ್ದ ಅಗ್ನಿಶಾಮಕ ಸಿಲಿಂಡರ್ ಬಳಸಿ ಬೆಂಕಿ ನಂದಿಸಲು ಯತ್ನಿಸಿದರು. ಒಳಗಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ಬೆಂಕಿ ಮತ್ತು ಹೊಗೆ ಬೇಗನೆ ಹತೋಟಿಗೆ ಬಂದಿತು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್ ಎಂ.ಎನ್. ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು.
ಮಧ್ಯದ ಕಟ್ಟಡವಾಗಿದ್ದರಿಂದ ವಾಹನಗಳನ್ನು ಪಾರ್ಕ್ ಮಾಡಿ ಒಳಗೆ ಹೋಗಲು ಸೂಕ್ತ ಪ್ರವೇಶ ಇರಲಿಲ್ಲ. ಆದರೂ ಸಿಬ್ಬಂದಿ ಕಟ್ಟಡದ ಇಕ್ಕೆಲಗಳಿಂದ ಪೈಪ್‌ಗಳನ್ನು ಅಳವಡಿಸಿ ಎರಡನೇ ಮಹಡಿಯನ್ನು ತಲುಪುವಲ್ಲಿ ಯಶಸ್ವಿಯಾದರು.
ಘಟನಾ ಸ್ಥಳದಲ್ಲಿ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿತ್ತು. ವೆಂಟಿಲೇಶನ್ ಕೊರತೆಯಿಂದಾಗಿ ಹೊಗೆ ಕೋಣೆಯ ತುಂಬಾ ಹರಡಿಕೊಂಡಿತ್ತು. ಸಿಬ್ಬಂದಿ ತಕ್ಷಣ ಕಿಟಕಿಗಳನ್ನು ತೆರೆದು ಹೊಗೆ ಹೊರ ಹೋಗುವಂತೆ ಮಾಡಿದರು.

ಆ ದೇವರೇ ನಮ್ಮನ್ನು ಕಾಪಾಡಿದ

ಶಸ್ತ್ರಚಿಕಿತ್ಸೆ ಆರಂಭವಾಗುವ ಮೊದಲೇ ಈ ಘಟನೆ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿತು. ಒಂದು ವೇಳೆ ಆಪರೇಷನ್ ಶುರುವಾದ ಮೇಲೆ ಸಂಭವಿಸಿದ್ದರೆ ಯಾರೂ ಬದುಕುತ್ತಿರಲಿಲ್ಲ. ದೇವರೇ ನಮ್ಮನ್ನು ಕಾಪಾಡಿದ್ದಾನೆ.
ಇದು, ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯ ಅನಸ್ತೇಶಿಯಾ ವೈದ್ಯೆ ಡಾ. ಶಿಲ್ಪಶ್ರೀ ಅವರ ಉದ್ಗಾರ.
ಸಿಲಿಂಡರ್ ಸ್ಫೋಟ ಘಟನೆಯ ಭೀಕರತೆಯನ್ನು ಅವರು ತಮ್ಮ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದು ಹೀಗೆ.
ಅಲ್ಲಿ ಎಂದಿನಂತೆ ಶಸ್ತ್ರಚಿಕಿತ್ಸೆಗೆ ಎಲ್ಲ ತಯಾರಿಗಳು ನಡೆದಿದ್ದವು. ಬೇರೊಂದು ಕೊಠಡಿಯಲ್ಲಿ ರೋಗಿಗಳ ಕೈಗೆ ಸೂಜಿ ಹಾಕುವುದು, ಡ್ರಿಪ್ಸ್ ಹಾಕುವುದು ಮುಂತಾದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಇನ್ನು 15 ನಿಮಿಷ ಆಗಿದ್ದರೆ ವೈದ್ಯರು ರೋಗಿಗಳನ್ನು ಕರೆತಂದು ಅನಸ್ತೇಶಿಯಾ ಕೊಡಬೇಕಿತ್ತು. ಆದರೆ ಅದಕ್ಕೆ ಮೊದಲೇ ಸ್ಫೋಟ ಸಂಭವಿಸಿತು.
ಆಪರೇಷನ್ ಕೊಠಡಿಯೊಳಗಿದ್ದ ವೈದ್ಯರು ಮತ್ತು ಸಿಬ್ಬಂದಿ ಅಪಾಯದ ಮುನ್ಸೂಚನೆ ಅರಿತು, ತಕ್ಷಣ ಹೊರಗೆ ಓಡಿ ಬಂದಿದ್ದು ಅವರ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಪ್ರತಿ ದಿನ ಆಸ್ಪತ್ರೆಗೆ ಕಣ್ಣಿನ ಆಪರೇಷನ್‌ಗಾಗಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರೆಲ್ಲರನ್ನೂ ಆಪರೇಷನ್ ಥೇಟರ್ ಪಕ್ಕದಲ್ಲೇ ಕೂರಿಸಲಾಗುತ್ತಿತ್ತು. ಆದರೆ ಇಂದು ಪುಣ್ಯಕ್ಕೆ ಯಾರೂ ಅಲ್ಲಿ ಕುಳಿತಿರಲಿಲ್ಲ, ಹಾಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ವೈದ್ಯರು ವಿವರಿಸಿದರು.
ಮಧ್ಯ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ರೋಗಿಗಳ ಚಿಕಿತ್ಸೆಗೆ ಆಸರೆಯಾಗಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ದುರಂತ ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.