ದಾವಣಗೆರೆಯಲ್ಲಿ ಸೋಮವಾರ ಸ್ವದೇಶಿ ಜಾಗೃತಿಗೆ ಸೈಕಲ್ ಜಾಥಾ ಕುರಿತು ಬ್ರಿಗೇಡಿಯರ್ ರವಿ ಮುನಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಲ್ ಕಂದಸಾಮಿ, ನೀಲಕಂಠ, ರಮೇಶ್ ಎನ್, ವೇದಮೂರ್ತಿ, ಜಹೀರ್ ಷರೀಫ್, ಸಹಸ್ರನಾಮಮ್ ಐಯರ್, ಶಾಂತಾ ಅಧಿಯಪ್ಪ, ತಿಪ್ಪೇಸ್ವಾಮಿ, ಪ್ರಸಾದ್ ಬಂಗೇರ, ಶ್ರೀನಿವಾಸ್, ನವೀನ್, ಮಹೇಶ್ ಇದ್ದರು.
- 3600 ಕಿ.ಮೀ. ಕ್ರಮಿಸುವ ಗುರಿ
- ಸಾರ್ವಜನಿಕರಿಗೆ ಅರಿವು
- ಶಾಲಾ ಕಾಲೇಜುಗಳಲ್ಲಿ ಮಾಹಿತಿ
ದಾವಣಗೆರೆ : ಯೂತ್ ಫಾರ್ ನೇಷನ್ ಮತ್ತು ಸ್ವದೇಶಿ ಜಾಗರಣ (ಬೆಂಗಳೂರು ಮತ್ತು ಗ್ರಾಮೀಣ ಕರ್ನಾಟಕ) ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನಿಂದ ಆರಂಭವಾಗಿರುವ ಸೈಕಲ್ ಜಾಥಾ ಸೋಮವಾರ ದಾವಣಗೆರೆಗೆ ಆಗಮಿಸಿತು.
ಜಾಥಾದ ಕುರಿತು ಬ್ರಿಗೇಡಿಯರ್ ರವಿ ಮುನಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆ, ಭಾರತೀಯ ಸಂಸ್ಕೃತಿ ಮತ್ತು ಕೃಷಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಜಾಥಾದ ಉದ್ದೇಶವಾಗಿದೆ ಎಂದು ತಿಳಿಸಿದರು.
ಡಿ. 13 ರಂದು ಬೆಂಗಳೂರಿನಿಂದ ಆರಂಭಿಸಿ ಮೊದಲ ಹಂತದಲ್ಲಿ ಕರಾವಳಿ ಭಾಗ ಸೇರಿ 10 ಜಿಲ್ಲೆಗಳಿಗೆ ಭೇಟಿ ನೀಡಿ 920 ಕಿ.ಮೀ. ಕ್ರಮಿಸಲಾಗಿದೆ. 2ನೇ ಹಂತದಲ್ಲಿ ಚನ್ನರಾಯಪಟ್ಟಣ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಇನ್ನಿತರ ಜಿಲ್ಲೆಗಳ ಮಾರ್ಗವಾಗಿ ಇದುವರೆಗೆ 460 ಕಿ.ಮೀ. ಬಂದಿರುವುದಾಗಿ ಹೇಳಿದರು.
ಒಂದು ದಿನಕ್ಕೆ 100 ರಿಂದ 120 ಕಿ.ಮೀ. ತೆರಳುತ್ತೇವೆ. ಶಾಲೆ, ಕಾಲೇಜುಗಳು, ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. 31 ಜಿಲ್ಲೆಗಳಿಗೆ ತೆರಳಿ 3600 ಕಿ.ಮೀ. ಕ್ರಮಿಸುವ ಗುರಿಯಿದೆ. ನಮ್ಮ ತಂಡದಲ್ಲಿ 17 ಜನರಿದ್ದೇವೆ. ಮೈಸೂರು, ತಮಿಳುನಾಡು, ತೆಲಂಗಾಣ, ದೆಹಲಿಯಿಂದ ಬಂದವರೂ ಇದ್ದಾರೆ. ಕೆಲವರನ್ನು ಬಿಟ್ಟರೆ ಉಳಿದವರು 60 ವರ್ಷ ಮೇಲ್ಪಟ್ಟವರೇ ಇದ್ದಾರೆ. 75 ವರ್ಷದ ಹಿರಿಯರೊಬ್ಬರು ತಂಡದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ದೇಶ ಸೇವೆಯ ತುಡಿತ
ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎನ್ನುವ ತುಡಿತದಿಂದ ಈ ಜಾಥಾದಲ್ಲಿ ಪಾಲ್ಗೊಂಡಿದ್ದೇವೆ. ದೇಶ ಮೊದಲು ಎಂಬ ಭಾವನೆ ಎಲ್ಲರಲ್ಲಿ ಬರಬೇಕು ಎಂದು ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.
ಇಂದಿನ ಮಕ್ಕಳಿಗೆ ಜಾಗೃತಿ ಮೂಡಿಸುವ ಅಗತ್ಯ ಹೆಚ್ಚಾಗಿದೆ. ಸ್ವದೇಶಿ ವಸ್ತುಗಳನ್ನೇ ಬಳಸುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ. ಸ್ಥಳೀಯವಾಗಿ ಬೆಳೆದ ಧಾನ್ಯ, ತರಕಾರಿಗಳನ್ನು ಉಪಯೋಗಿಸುವುದರಿಂದ ನಮ್ಮ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಾಶ್ವಾತ್ಯ ಅನುಕರಣೆಯನ್ನು ಬಿಟ್ಟು ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಕುಟುಂಬದ ಒಗ್ಗಟ್ಟು ಕಾಯ್ದುಕೊಳ್ಳುವ ಮೂಲಕ ದೇಶದ ಏಕತೆ ಸಾಧಿಸಬಹುದು. ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕರ್ನಲ್ ಕಂದಸಾಮಿ, ವಿಜ್ಞಾನಿ ನೀಲಕಂಠ, ರಮೇಶ್ ಎನ್, ವೇದಮೂರ್ತಿ, ಜಹೀರ್ ಷರೀಫ್, ಸಹಸ್ರನಾಮಮ್ ಐಯರ್, ಶಾಂತಾ ಅಧಿಯಪ್ಪ, ವರ್ತಮಾನ ಫೋರಂನ ತಿಪ್ಪೇಸ್ವಾಮಿ, ಪ್ರಸಾದ್ ಬಂಗೇರ, ಶ್ರೀನಿವಾಸ್, ನವೀನ್, ಬೈಸಿಕಲ್ ಕ್ಲಬ್‌ನ ಮಹೇಶ್ ಇದ್ದರು.