- ವೈಯಕ್ತಿಕ ಬೆಳೆಹಾನಿ ಸಮೀಕ್ಷೆಗೆ ಒತ್ತಡ
- ಪರ್ಯಾಯ ಬೆಳೆ ಪರಿಗಣಿಸಲು ರೈತರ ಆಗ್ರಹ
- ಮಳೆ ಮಾಪನದಿಂದಲೂ ಅವೈಜ್ಞಾನಿಕ ವರದಿ ಆತಂಕ
ದಾವಣಗೆರೆ: ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮೊದಲಾದ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ನಷ್ಟಕ್ಕೀಡಾದ ರೈತರಿಗೆ ಖಾಸಗಿ ಕಂಪನಿಗಳ ಮೂಲಕ ಕಂದೀಲಿನಂತೆ ನೆರವಾಗುವುದೇ ಬೆಳೆವಿಮೆ ಯೋಜನೆ. ಆದರೆ, ವಿಮೆಯಡಿ ನಿಗದಿಪಡಿಸಿದ ಹಳೆಯ ಮಾನದಂಡಗಳಿಂದ ರೈತರಿಗೆ ನಿರೀಕ್ಷಿತ ಲಾಭ ಸಿಗುವುದಿಲ್ಲ. ಹೀಗಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಚಾರದಲ್ಲೂ ವಿಮೆ ಮಾನದಂಡಗಳು ಬದಲಾಗಬೇಕು ಎಂಬ ಕೂಗು ಜಿಲ್ಲೆಯ ರೈತರದು.
ಒಟ್ಟು ಏಳು ವರ್ಷದ ಬೆಳೆ ಕಟಾವು ಸಮೀಕ್ಷೆಯಡಿ ಐದು ವರ್ಷದ ಸರಾಸರಿ ದತ್ತಾಂಶ ಪಡೆದು ಕನಿಷ್ಠ ಬೆಳೆಯ ಮಾನದಂಡ ಆಧರಿಸಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿವಾರು ಬೆಳೆವಿಮೆ ನೀಡುವುದು ಚಾಲ್ತಿಯಲ್ಲಿದೆ.
ಆದರೆ ಐದು ವರ್ಷದ ಗರಿಷ್ಠ ಬೆಳೆಯ ಮಾನದಂಡ ಆಧರಿಸಿ ಪರಿಹಾರ (ಬೆಳೆವಿಮೆ) ನೀಡಬೇಕು. ಹೋಬಳಿ, ಪಂಚಾಯಿತಿ ಮಟ್ಟದ ಬದಲಾಗಿ ಬೆಳೆ ಸಮೀಕ್ಷೆ ಮಾದರಿಯಲ್ಲೇ ರೈತರ ವೈಯಕ್ತಿಕ ಬೆಳೆಹಾನಿ ಪರಿಶೀಲನೆಯಾಗಬೇಕು. ಪಹಣಿಯಲ್ಲಿ ಬೆಳೆ ನಮೂದಾಗದಿದ್ದರೂ ಹೊಲದಲ್ಲಿ ಬೆಳೆ ಇರುವಿಕೆ ಕಡ್ಡಾಯವಾಗಬೇಕು. ವಿಮಾ ಪ್ರತಿನಿಧಿಗಳು ಖುದ್ದು ಬೆಳೆ ಪ್ರದೇಶಕ್ಕೆ ತೆರಳಿ ಸಕಾಲಿಕ ಪರಿಶೀಲಿಸಿ ವಿಮೆಗೆ ಪರಿಗಣಿಸಬೇಕೆಂದು ರೈತರ ಬೇಡಿಕೆ.
ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಕಾರಣ ಜಿಲ್ಲೆಯಲ್ಲಿ ಇದುವರೆಗೆ ಭತ್ತ ನಾಟಿ ಮಾಡಲಾಗಿಲ್ಲ. ಹೀಗಾಗಿ ವಿಮೆ ಕಂತು ಭರಿಸುವ ಅವಧಿಯನ್ನು ಇನ್ನೊಂದು ತಿಂಗಳಿಗೆ ವಿಸ್ತರಿಸಬೇಕು. ಬರನಿರೋಧಕವಾಗಿ ರಾಗಿ ಜತೆಗೆ ಹುರುಳಿ ಬೆಳೆಯಲು ಜಿಲ್ಲಾಡಳಿತ ಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲೂ ವಿಮಾ ಕಂತು ಪಾವತಿಗೆ ಹೆಚ್ಚಿನ ಅವಧಿ ನೀಡಬೇಕು.
ಬರ ಸನ್ನಿವೇಶದಲ್ಲಿ ರೈತರು ಪರ್ಯಾಯ ಬೆಳೆಗಳ ಬಿತ್ತನೆಯ ಆಲೋಚನೆಯಲ್ಲಿದ್ದಾರೆ. ಹೀಗಾಗಿ ಉತ್ತಮ ಇಳುವರಿಯಾಗಿ ಮಾರುಕಟ್ಟೆಯಲ್ಲಿ ದರ ಕುಸಿತದ ಸಂದರ್ಭದಲ್ಲೂ ಸರ್ಕಾರ ನೆರವಿಗೆ ಬರಬೇಕು ಎಂಬುದು ರೈತ ಮುಖಂಡರ ವಾದ.
ಕೆಲವು ಆರ್ಥಿಕ ಸಂಸ್ಥೆಗಳು ಸಾಲ ಇದ್ದವರಿಂದ ವಿಮಾ ಕಂತು ಪಾವತಿ ಮಾಡಿಕೊಳ್ಳುತ್ತಿವೆ. ಎಸ್‌ಬಿ ಖಾತೆಯುಳ್ಳ ರೈತರನ್ನು ಪರಿಗಣಿಸುತ್ತಿಲ್ಲ. ಕೆಲವು ಬ್ಯಾಂಕ್‌ಗಳು ಹೆಚ್ಚುವರಿ ಕಾರಣಕ್ಕೆ ಕಂತು ಪಾವತಿ ಮಾಡಿಸಿಕೊಳ್ಳಲು ನಿರಾಕರಿಸಿ ಕರ್ನಾಟಕ ಒನ್ ಇತರೆ ಕೇಂದ್ರಗಳಲ್ಲಿ ಭರ್ತಿ ಮಾಡಲು ಹೇಳಿ ತಪ್ಪಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಇವೆ.
ತೋಟಗಾರಿಕೆ ಬೆಳೆಗಳ ವಿಚಾರಕ್ಕೆ ಬಂದರೆ ಹವಾಮಾನ ಆಧಾರಿತ ಬೆಳೆವಿಮೆಗೆ ಮಳೆ ಮಾಪನ ಕೇಂದ್ರಗಳೇ ಮಾನದಂಡ. ಆದರೆ ಕೆಲವೆಡೆ ನಿರಂತರ ಬ್ಯಾಟರಿ ಕಳ್ಳತನ ಆಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ವರದಿ ಬಾರದಂತಾಗಿದೆ. ಹೀಗಾಗಿ ಬೆಳೆ ವಿಮೆ ನಿರ್ಧಾರ ಕೂಡ ಅವೈಜ್ಞಾನಿಕವಾಗುತ್ತಿದೆ ಎಂಬ ಆರೋಪವಿದೆ. ಮಳೆ ಮಾಪನದ ಲೋಪಕ್ಕೆ ರೈತರು ಗ್ರಾಹಕರ ಕೋರ್ಟ್‌ಗೆ ಹೋಗುವ ಅವಕಾಶಗಳೂ ಹೆಚ್ಚಲಿವೆ ಎನ್ನುತ್ತವೆ ಮೂಲಗಳು.
ಭೀಮನೆರೆ ಗ್ರಾಮದಲ್ಲಿ ಒಂದೂವರೆ ವರ್ಷದಿಂದ ಮಳೆ ಮಾಪನ ಕೇಂದ್ರ ದುರಸ್ತಿಯಾಗಿರಲಿಲ್ಲ. ಅನೇಕ ಬಾರಿ ಬ್ಯಾಟರಿ ಕಳ್ಳತನವಾಗಿದೆ. ಕಂದಾಯ ಇಲಾಖೆ, ಪಂಚಾಯಿತಿಯವರು ಉಡಾಫೆ ಮಾಡಿದರು. 24-25ನೇ ಸಾಲಿನಲ್ಲಿ ಕೋಗಲೂರು ಅಡಕೆ ಬೆಳೆಗಾರರಿಗೆ 26 ಸಾವಿರ ರೂ., ಮೆದಿಕೆರೆಗೆ 15 ಸಾವಿರ ರೂ. ಬೆಳೆವಿಮೆ ಬಂದರೆ ಭೀಮನೆರೆ ಗ್ರಾಮದವರಿಗೆ ಕೇವಲ 5800 ರೂ. ವಿಮೆ ದಕ್ಕಿದೆ.
ಜಿಲ್ಲಾಡಳಿತದ ಮೂಲಗಳ ಪ್ರಕಾರ ಜಿಲ್ಲೆಯ 169 ಕಡೆಗಳಲ್ಲಿ ಮಳೆ ಮಾಪನ ಕೇಂದ್ರಗಳಿವೆ. ಈ ಪೈಕಿ 133 ಕಾರ್ಯ ನಿರ್ವಹಣೆಯಲ್ಲಿದ್ದು, ಹಲವೆಡೆ ನಿರಂತರ ಬ್ಯಾಟರಿ ಕಳ್ಳತನ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ವರದಿ ಆಗುತ್ತಿಲ್ಲ. 70 ಕಡೆಗಳಲ್ಲಿ ಈ ಯಂತ್ರಗಳು ಬದಲಾವಣೆಗೆ ಕಾದಿದ್ದು (ಕೆಎಸ್‌ಎನ್‌ಡಿಎಂಸಿ) ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಪತ್ರ ರವಾನೆಯಾಗಿದೆ. ಇದಲ್ಲದೆ 40 ಕಡೆಗಳಲ್ಲಿ ಹೊಸ ಮಾಪನ ಕೇಂದ್ರಗಳು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಗಳೂ ಸೇರಿ ಜಿಲ್ಲೆಯಲ್ಲಿ (ಜು. 25ರವರೆಗೆ) 98674 ರೈತರು ನೋಂದಣಿ ಮಾಡಿದ್ದಾರೆ. 1,59,784 ಎಕರೆ ವಿಸ್ತೀರ್ಣ ವ್ಯಾಪ್ತಿಯಲ್ಲಿ ನೋಂದಣಿ ಕಾರ್ಯ ನಡೆದಿದೆ.
ತೋಟಗಾರಿಕೆ ಅಡಿಯಲ್ಲಿ 90,655 ಎಕರೆ ವಿಸ್ತೀರ್ಣ ವ್ಯಾಪ್ತಿಯ ಒಟ್ಟು 41,137 ರೈತರು ಹವಾಮಾನ ಆಧಾರಿತ ಬೆಳೆವಿಮೆಯಡಿ ನೋಂದಣಿಯಾಗಿದ್ದಾರೆ. ಕೃಷಿ ಇಲಾಖೆಯಡಿ 69,129 ಎಕರೆ ವ್ಯಾಪ್ತಿಯ 57,537 ರೈತರು ಬೆಳೆವಿಮೆಗೆ ಎಂಟ್ರಿ ಆಗಿದ್ದಾರೆ.
58,833 ಎಕರೆ ವ್ಯಾಪ್ತಿಯ ಮೆಕ್ಕೆಜೋಳ ಬೆಳೆಯುವ 50,515 ಕೃಷಿಕರು, 58,833 ಎಕರೆ ವಿಸ್ತೀರ್ಣದ 40,901 ಅಡಿಕೆ ಬೆಳೆಗಾರರ ನೋಂದಣಿ ಜಿಲ್ಲೆಯಲ್ಲಿ ಅಧಿಕ. ಅದರಲ್ಲೂ ಜಗಳೂರು ತಾಲೂಕಿನ ರೈತರು ಸ್ಪಂದಿಸಿರುವುದೇ ಗಮನಾರ್ಹ. ಸೂರ್ಯಕಾಂತಿ (ಆ.15) ಹೊರತುಪಡಿಸಿದರೆ ಉಳಿದೆಲ್ಲ ಬೆಳೆಗಳ ವಿಮೆ ನೋಂದಣಿಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದೆ.
ಬೆಳೆಗಳು ರೈತರು ವಿಸ್ತೀರ್ಣ (ಎಕರೆ)
ಬೆಳೆವಿಮೆ ಮಾನದಂಡಗಳು ಬದಲಾಗಬೇಕು. ಬೆಳೆಹಾನಿ ನೇರ ಸಕಾಲಿಕ ಸಮೀಕ್ಷೆ ನಡೆಸಬೇಕು. ಬರ ಕಾರಣಕ್ಕೆ ಬಿತ್ತನೆ ಕಾರ್ಯ ಅನಿಶ್ಚತತೆಯಲ್ಲಿದೆ. ರೈತರು ಪರ್ಯಾಯ ಬೆಳೆಗೆ ಆಲೋಚನೆಯಲ್ಲಿರುವ ಬಿತ್ತನೆವರೆಗೂ ವಿಮಾ ಅವಧಿ ವಿಸ್ತರಿಸಬೇಕು. ಬೆಳೆ ವಿಮೆ ಕ್ಲೇಮ್ ಕೊಡಿಸುವತ್ತಲೂ ಕೃಷಿ ಇಲಾಖೆ ಕಾಳಜಿ ತೋರಿಸಬೇಕು.
— ತೇಜಸ್ವಿ ಪಟೇಲ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ.
ಹವಾಮಾನ ಆಧಾರಿತ ಬೆಳೆವಿಮೆಯಡಿ ರೈತರು ಸೂಕ್ತ ಪರಿಹಾರ ಪಡೆಯಬೇಕಿದ್ದರೆ ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಸುಸ್ಥಿತಿಯಲ್ಲಿಡಬೇಕು. ಬ್ಯಾಟರಿ ಕಳ್ಳತನವಾಗದಂತೆ ಲಾಕಿಂಗ್ ವ್ಯವಸ್ಥೆ ತರಬೇಕು. ಈ ಕೇಂದ್ರಗಳ ದುರಸ್ತಿಗೆ ಅಧಿಕಾರಿಗಳು ಸ್ಪಂದಿಸಲು ಜಿಲ್ಲಾಡಳಿತ ಗಮನ ಹರಿಸಬೇಕು.
— ಮಹೇಂದ್ರಗೌಡ, ಭೀಮನೆರೆ ರೈತ.
ರೈತರು ಪ್ರತಿ ಬೆಳೆಗೆ ವ್ಯಯಿಸುವ ವೆಚ್ಚ ಹೆಚ್ಚು. ಆದರೆ ಬೆಳೆ ವಿಮೆ ಯೋಜನೆಯಡಿ ಹೆಕ್ಟೇರ್‌ವಾರು ನೀಡುವ ಪರಿಹಾರ ಗಮನಿಸಿದರೆ ಪ್ರತಿ ಗುಂಟೆಗೆ 100 ರೂ. ಕೂಡ ಸಿಗುತ್ತಿಲ್ಲ. ಮಳೆ ಮಾಪನ ಕೇಂದ್ರಗಳು ಬಹುತೇಕ ಕಡೆಗಳಲ್ಲಿ ಇಲ್ಲ. ಮಳೆ ಅಂತರ ಹೊಲದಿಂದ ಹೊಲಕ್ಕೆ ವ್ಯತ್ಯಾಸವಾಗಲಿದೆ. ಹೀಗಾಗಿ ಮಳೆ ವರದಿ ನೆಪದಲ್ಲಿ ರೈತರು ಸೂಕ್ತ ಬೆಳೆವಿಮೆಯಿಂದ ವಂಚಿತರಾಗಲಿದ್ದಾರೆ.
— ಹೊನ್ನೂರು ಮುನಿಯಪ್ಪ.ರೈತ ಮುಖಂಡ.