ದಾವಣಗೆರೆಯ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಮಹಾರಾಷ್ಟ್ರದ ಧಾರಾಶಿವ್‌ನ ಜಿಲ್ಲಾಧಿಕಾರಿ ಕೀರ್ತಿ ಕಿರಣ್ ಎಚ್. ಪೂಜಾರ್ ಉದ್ಘಾಟಿಸಿದರು. ಡಾ.ಬಿ. ಕರಿಬಸಪ್ಪ, ಡಾ.ಎಸ್.ಪಿ. ನಾಗನಗೌಡ, ಎಂ.ಪಿ.ಭೀಮಪ್ಪ, ಎಸ್.ಸವಿತಾ ಇತರರಿದ್ದರು.  
ದಾವಣಗೆರೆ

ವೃತ್ತಿ ಜೀವನದಲ್ಲಿ ವಿಮರ್ಶೆ, ಕುತೂಹಲ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಐಎಎಸ್ ಪರೀಕ್ಷಾರ್ಥಿಗಳಲ್ಲಿರಲಿ ಧನಾತ್ಮಕ ಭಾವ
  • ಧಾರಾಶಿವ್ ಜಿಲ್ಲಾಧಿಕಾರಿ ಕೀರ್ತಿ ಕಿರಣ್ ಹೇಳಿಕೆ
  • ಮಹಿಳಾ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಸಮಾರೋಪ
ದಾವಣಗೆರೆ: ಆಳವಾದ ವಿಚಾರಗ್ರಹಿಕೆ, ವಿಮರ್ಶಾತ್ಮಕ ಓದು, ವಿಷಯವಾರು ಕುತೂಹಲದ ನೋಟಗಳಿರಬೇಕು. ಹಾಗಿದ್ದಾಗ ಐಎಎಸ್ ಸೇರಿ ಯಾವುದೇ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿವೆ ಎಂದು ಮಹಾರಾಷ್ಟ್ರದ ಧಾರಾಶಿವ್‌ನ ಜಿಲ್ಲಾಧಿಕಾರಿ ಕೀರ್ತಿ ಕಿರಣ್ ಎಚ್. ಪೂಜಾರ್ ಹೇಳಿದರು.
ನಗರದ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನನ್ನ ಐಎಎಸ್ ಓದಿನ ತಯಾರಿ ವೇಳೆ ಮಾರ್ಗದರ್ಶಕರು ಇರಲಿಲ್ಲ. ಈಗ ಮೊಬೈಲ್, ನೋಟ್ಸ್, ತರಬೇತಿ ಎಲ್ಲ ಸವಲತ್ತು ಸಿಗುತ್ತಿವೆ. ಓದಿನಲ್ಲಿ ನಿರಂತರತೆ, ಶಿಸ್ತು ಅತಿಮುಖ್ಯ. ಸಮಸ್ಯೆಗಳ ನಡುವೆಯೂ ಧನಾತ್ಮಕ ಮನೋಭಾವ ಬೆಳೆಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಐಎಎಸ್ ಅಧಿಕಾರಿಗೆ ಸಮಾಜದ ಆಗುಹೋಗುಗಳ ಬಗ್ಗೆ ತಿಳಿಯುವ ಅವಕಾಶದ ಜತೆಗೆ ಸಮಸ್ಯೆಗಳಿಗೆ ಪರಿಹಾರ ದಕ್ಕಿಸುವ ಅಧಿಕಾರವೂ ಇರಲಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು ಎಂದರು.
ದೈನಂದಿನ ದೈಹಿಕ ಚಟುವಟಿಕೆಗಳು, ಕ್ರೀಡೆಗಳು ದಿನವನ್ನು ಉಲ್ಲಾಸವಾಗಿ ಇರಿಸಲಿವೆ. ಅದೇ ರೀತಿಯಲ್ಲಿ ಪಠ್ಯಕ್ರಮದ ನಿರಂತರದ ಓದುವಿಕೆ ಜತೆಯಲ್ಲೇ ಪಠ್ಯೇತರ ಕಾರ್ಯಗಳು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ನೆರವಾಗಲಿವೆ ಎಂದು ಹೇಳಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆಯೂ ಮಾಹಿತಿ ನೀಡಿದರು.
ಪ್ರಾಚಾರ್ಯ ಡಾ.ಬಿ. ಕರಿಬಸಪ್ಪ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎಸ್.ಪಿ. ನಾಗನಗೌಡ, ಐಕ್ಯುಎಸಿ ಸಂಚಾಲಕ ಎಂ.ಪಿ.ಭೀಮಪ್ಪ, ಕಚೇರಿ ಅಧೀಕ್ಷಕಿ ಎಸ್.ಸವಿತಾ, ಸಿಡಿಸಿ ಸದಸ್ಯರಾದ ಕೆ.ಎಸ್. ಈಶ್ವರಪ್ಪ, ಅನಿಲ್ ಗೌಡ, ಸುಜಾತಾ, ಪ್ರಾಧ್ಯಾಪಕರಾದ ಡಾ.ಶೋಭಾ, ಸವಿತಾ, ಸುನೀತಾ, ಶಿವರಾಜ್, ಸಿದ್ದಲಿಂಗಮ್ಮ, ಸುರೇಖಾ, ತೊಪ್ಪಲು ಮಲ್ಲಿಕಾರ್ಜುನ ಇತರರಿದ್ದರು.
ಡಾ.ಎಂ.ಪಿ.ಭೀಮಪ್ಪ ಸ್ವಾಗತಿಸಿದರು. ಸುಭಾಷ್ ಕಾರ್ಯಕ್ರಮ ನಿರ್ವಹಿಸಿದರು. ಸುರೇಖಾ ವಂದಿಸಿದರು.