ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಸರ್ವ ಸಂಘಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಗೌಡ, ಎನ್.ರಮೇಶ್, ಎಚ್.ಎಸ್. ಗಣೇಶ್‌ರಾವ್, ಕೆ. ಶಿವಕುಮಾರ್ ಇತರರಿದ್ದರು.  
ದಾವಣಗೆರೆ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಅಗತ್ಯ ಯೋಜನೆಗಳಿಗಿಲ್ಲ ಆರ್ಥಿಕ ಧನಸಹಾಯ
  • ಬೇಡವಾದ ಕಿಟ್‌ಗಳ ಹೆಸರಲ್ಲಿ ಹಣ ಅಪವ್ಯಯ
  • ರಾಜ್ಯವ್ಯಾಪಿ ಹೋರಾಟಕ್ಕೆ ಶಿವಕುಮಾರ ಗೌಡ ಎಚ್ಚರಿಕೆ
ದಾವಣಗೆರೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಅಗತ್ಯವಿಲ್ಲದ ಯೋಜನೆಗಳನ್ನು ಜಾರಿಗೊಳಿಸಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಸರ್ವ ಸಂಘಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಗೌಡ ಆರೋಪಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅಗತ್ಯ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ, ಆರೋಗ್ಯ, ವಿವಾಹ ಪ್ರೋತ್ಸಾಹಧನ ಮುಂತಾದ ಸಾಮಾಜಿಕ ಸೌಲಭ್ಯಗಳ ಒದಗಿಸುವ ಉದ್ದೇಶದಿಂದ 2006-07ನೇ ಸಾಲಿನಲ್ಲಿ ಪ್ರಾರಂಭವಾದ ಮಂಡಳಿಯು ಈಗ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನೇ ಒದಗಿಸುತ್ತಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಅಗತ್ಯವೇ ಇಲ್ಲದ ಟೂಲ್‌ಕಿಟ್, ಸೇಫ್ಟಿಕಿಟ್, ಆರ್‌ಪಿಎಲ್ ತರಬೇತಿ, ಪ್ರಿವೆಂಟಿವ್ ಹೆಲ್ತ್ ಕೇರ್ ಚೆಕಪ್, ಆರೋಗ್ಯ ಸಂಚಾರಿ ಕ್ಲಿನಿಕ್, ನ್ಯೂಟ್ರಿಷಿಯನ್ ಕಿಟ್, ಕಾರ್ಮಿಕ ಸೇವಾ ಕೇಂದ್ರ ಒಳಗೊಂಡಂತೆ ಇತರೆ ಯೋಜನೆಗಳ ಜಾರಿಯ ಮೂಲಕ ಸಾವಿರಾರು ಕೋಟಿ ರೂ. ದುಂದುವೆಚ್ಚ ಮಾಡಲಾಗಿದೆ ಎಂದು ದೂರಿದರು.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಹಾಯಧನ, ಮಕ್ಕಳ ವಿವಾಹಕ್ಕೆ ಸಹಾಯಧನ, ಮೃತರ ಕುಟುಂಬಗಳಿಗೆ ನೆರವು ಮೊದಲಾದ ಸೌಲಭ್ಯ ನೀಡಲಾಗುತ್ತಿಲ್ಲ. ಬೇಡವಾದ ಯೋಜನೆಗಳಿಗೆ ಕೋಟ್ಯಂತರ ರೂ.ಗಳನ್ನು ಅನಗತ್ಯವಾಗಿ ವೆಚ್ಚ ಮಾಡಿ ಟೆಂಡರ್ ಕರೆದು, ಕೆಲವೇ ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಬಹುತೇಕ ಕಾರ್ಮಿಕರು ಮೃತಪಟ್ಟು ವರ್ಷಗಳೇ ಕಳೆದರೂ ಪರಿಹಾರ ನೀಡದೆ ಸತಾಯಿಸಲಾಗುತ್ತಿದೆ. ಮಂಡಳಿಯಲ್ಲೀಗ ಬರೀ ಟೆಂಡರ್‌ಗಳ ಕಾರುಬಾರು ನಡೆದಿದೆ ಎಂದು ದೂರಿದರು.
ಕಲ್ಯಾಣ ಮಂಡಳಿಯಲ್ಲಿದ್ದ 40 ಸಾವಿರ ಕೋಟಿ ರೂ. ಅನುದಾನ ಈಗ 7 ಸಾವಿರ ಕೋಟಿಗೆ ತಲುಪಿದೆ. 20 ವರ್ಷಗಳಲ್ಲಿ 33 ಸಾವಿರ ಕೋಟಿ ರೂ. ಅಪವ್ಯಯ ಮಾಡಲಾಗಿದೆ. ಕಾರ್ಮಿಕ ಇಲಾಖೆ ಸಚಿವರಾಗಿದ್ದ ಸಂತೋಷ್ ಲಾಡ್ ಒಂದೂ ಸಭೆಯನ್ನೂ ನಡೆಸಲಿಲ್ಲ. ಅನಗತ್ಯ ಯೋಜನೆಗಳಿಗೆ ಹಣ ವ್ಯಯಿಸಬಾರದು ಎಂಬ ಮನವಿಗೆ ಸ್ಪಂದಿಸಲೇ ಇಲ್ಲ ಎಂದು ದೂರಿದರು.
ಟೂಲ್ ಮತ್ತು ಸೇಫ್ಟಿ ಕಿಟ್ ಹೆಸರಲ್ಲಿ 550 ಕೋಟಿ ರೂ, ಆರ್‌ಪಿಎಲ್ ತರಬೇತಿ ಹೆಸರಲ್ಲಿ 100 ಕೋಟಿ ರೂ, ಆರೋಗ್ಯ ತಪಾಸಣಾ ಶಿಬಿರದ ಹೆಸರಲ್ಲಿ 950 ಕೋಟಿ ರೂ. ಅಪವ್ಯಯ ಮಾಡಲಾಗಿದೆ. ಶಾಲೆಗಳು ಪ್ರಾರಂಭವಾಗಿವೆ. ಈಗ ಸ್ಕೂಲ್ ಕಿಟ್‌ಗಾಗಿ ನೂರಾರು ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ.
ಈಗಲಾದರೂ ಕಾರ್ಮಿಕರಿಗೆ ಅಗತ್ಯವುಳ್ಳ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ, ಮುತ್ತಿಗೆ, ಬೀಗ ಹಾಕುವುದು ಒಳಗೊಂಡಂತೆ ತೀವ್ರ ಸ್ವರೂಪ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಎನ್.ರಮೇಶ್, ಎಚ್.ಎಸ್. ಗಣೇಶ್‌ರಾವ್, ಕೆ. ಶಿವಕುಮಾರ್, ಶಶಿನಾಯ್ಕ, ಮುಸ್ತಾಕ್ ನದಾಫ್, ಆರ್. ಚಂದ್ರಪ್ಪ, ನೀಲಕಂಠೇಶ್ವರನಾಯ್ಕ, ಲೋಕೇಶ್‌ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.