ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮವನ್ನು ಬ್ರಹ್ಮಾಕುಮಾರಿ ಲೀಲಾಜಿ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿ.ಸಿ. ಲೋಕೇಶ್, ಬಿ.ಎನ್. ಮಲ್ಲೇಶ್, ಇ.ಎಂ.ಮಂಜುನಾಥ್, ನಾಗರಾಜ ಬಡದಾಳ್, ಏಕಾಂತಪ್ಪ ಇತರರಿದ್ದರು.
- ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿಕೆ
- ವರದಿಗಾರಿಕೆ ಜತೆಗೆ ಮಾನವೀಯತೆಯಿರಲಿ
- ಜಿಲ್ಲಾ ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ
ದಾವಣಗೆರೆ: ಸುಳ್ಳಿನ, ಜೊಳ್ಳಿನ, ದಂಧೆಕೋರ ಹಾಗೂ ಕ್ರಿಮಿನಲ್ ಪತ್ರಕರ್ತರು ಸುದ್ದಿಮನೆಗೆ ಬಂದಿದ್ದಾರೆ. ಅವರನ್ನು ಮುಲಾಜಿಲ್ಲದೆ ಆಚೆಗೆ ಇರಿಸುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಇಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರದಿಯಿಂದ ಬದಲಾವಣೆ ಆಗಬಹುದೆಂದು ಸಮಾಜ ಆಸೆಗಣ್ಣಿನಿಂದ ನಮ್ಮತ್ತ ನೋಡುತ್ತಿದೆ. ಹೀಗಾಗಿ ಪ್ರಶಸ್ತಿ, ವಿಸಿಟಿಂಗ್ ಕಾರ್ಡ್ ಪತ್ರಕರ್ತರು ಹಾಗೂ ನಿಗದಿತವಾಗಿ ಪತ್ರಿಕೆ ಹೊರತರದವರಿಗಿಂತಲೂ ವಿಶ್ವಾಸಾರ್ಹ ಪತ್ರಕರ್ತರು ಬೇಕಿದ್ದಾರೆ. ಇಂಥ ನೈಜ ಪತ್ರಕರ್ತರನ್ನು ಉಳಿಸಿ ಬೆಳೆಸುವ ಸವಾಲು ಕಾನಿಪಕ್ಕಿದೆ ಎಂದರು.
ವರದಿಗಾರಿಕೆ ಮಾಡುವಾಗ ನಮ್ಮ ಹೃದಯದೊಳಗೆ ನ್ಯಾಯಾಧೀಶರನ್ನು ಪ್ರತಿಷ್ಠಾಪನೆ ಮಾಡಿಕೊಂಡು ಒಳಿತು ಕೆಡುಕಿನ ಬಗ್ಗೆ ವಿಮರ್ಶಿಸಬೇಕು. ಉತ್ತಮ ವರದಿಗಾರಿಕೆ ಜತೆಗೆ ಒಡನಾಟ, ಮಾನವೀಯತೆವೂ ಮುಖ್ಯ. ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕಿದೆ. ನಿಮ್ಮ ವರದಿಯಿಂದ ಕೆಲವರಿಗೆ ಒಂದಿಷ್ಟ ಸಹಾಯವಾದರೂ ಸಾರ್ಥಕ್ಯ ಬರಲಿದೆ ಎಂದು ಹೇಳಿದರು.
ಸಂಘದಲ್ಲಿ 1.01 ಕೋಟಿ ರೂ. ಠೇವಣಿ ಇದ್ದು ಇದರಿಂದ ಬಡ್ಡಿ ಹಣವನ್ನು ಕ್ಷೇಮಾಭಿವೃದ್ಧಿ ನಿಧಿಯಡಿ ಪತ್ರಕರ್ತರ ಸಹಾಯಕ್ಕೆ ಬಳಸಲಾಗುತ್ತಿದೆ. ಪತ್ರಕರ್ತರಿಗೆ ಆಪತ್ಕಾಲದಲ್ಲಿ ನೆರವಾಗಲು ಆಪತ್ಭಾಂದವ ಯೋಜನೆಯಡಿ 25 ಲಕ್ಷ ರೂ. ಇದೆ. ಇದರಲ್ಲಿ ಆಸಕ್ತ ಪತ್ರಕರ್ತರು ಹಣ ನೀಡಿ ಕೈ ಜೋಡಿಸಬಹುದು ಎಂದ ಅವರು, ಬೇಸರವಿದ್ದಲ್ಲಿ ಕಾನಿಪ ಸಂಘಟನೆಯ ರಥವನ್ನು ಹಿಂದಕ್ಕೆ ಎಳೆಯದಿರಿ ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಈಶ್ವರೀಯ ಬ್ರಹ್ಮಕುಮಾರಿ ವಿವಿಯ ಪ್ರಧಾನ ಸಂಚಾಲಕಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಪತ್ರಿಕೋದ್ಯಮ ವೃತ್ತಿ ಮಾತ್ರವಲ್ಲ. ಅದೊಂದು ಜವಾಬ್ದಾರಿ. ಜನರನ್ನು ನೋವು, ಕಣ್ಣೀರೊರೆಸುವ ಶಕ್ತಿ ಪತ್ರಕರ್ತರಿಗಿದೆ. ಸತ್ಯಕ್ಕಾಗಿ ಬರೆಯಬೇಕು, ನ್ಯಾಯಕ್ಕಾಗಿ ನಿಮ್ಮ ಧ್ವನಿ ಗಟ್ಟಿಯಾಗಬೇಕು. ನಿಮ್ಮ ಧೈರ್ಯ ಎಂದಿಗೂ ಕುಗ್ಗಬಾರದು ಎಂದು ಆಶಯ ವ್ಯಕ್ತಪಡಿಸಿದರು.
ಒಂದು ಸುದ್ದಿ ಸರ್ಕಾರವನ್ನೇ ಬದಲಿಸಿ, ಕೋಟೆಯನ್ನು ಬೀಳಿಸಬಹುದು ಮತ್ತು ಅನ್ಯಾಯಕ್ಕೊಳಗಾದ ಜರಿಗೆ ಪತ್ರಕರ್ತರು ದನಿಯಾಗಬಲ್ಲದು. ಪತ್ರಿಕೋದ್ಯಮ ಸುಳ್ಳಿನ ವಿರುದ್ಧದ ಸತ್ಯದ ಯುದ್ಧವಾಗಿದೆ. ಅನ್ಯಾಯದ ವಿರುದ್ಧದ ನ್ಯಾಯದ ಯುದ್ಧವಾಗಿದೆ. ಪತ್ರಕರ್ತರಿದ್ದಲ್ಲಿ ದೇಶಕ್ಕೆ ದಾರಿ ಇದೆ ಎಂದು ಹೇಳಿದರು.
ಸಂಘದ ರಾಜ್ಯ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮಾತನಾಡಿ ಸಂಘದ ಬೇಡಿಕೆಯಂತೆ ಸಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಆದರೆ ನಮಗಿನ್ನೂ ಸಮಾಧಾನವಾಗಿಲ್ಲ. ಅಧಿಕಾರಿಗಳು ವಿಧಿಸಿದ ನಿಬಂಧನೆಗಳನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಧ್ಯಮ ಸಂಜೀವಿನಿ ಯೋಜನೆಯನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರಿಗೆ ಪಿಂಚಣಿ ಯೋಜನೆಯ ನಿಬಂಧನೆ ಕೂಡ ಸರಳೀಕರಣಗೊಳಿಸಬೇಕು ಎಂದು ಕಾನಿಪ ಹೋರಾಟ ನಡೆಸಿದೆ. ಸಂಘದ ವಿರುದ್ಧ ಅಪಪ್ರಚಾರ ಸಹಿಸುವುದಿಲ್ಲ ಎಂದೂ ಎಚ್ಚರಿಕೆ ನೀಡಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ ಕೃತಕ ಬುದ್ದಿಮತ್ತೆಯಿಂದ ಪತ್ರಿಕೋದ್ಯಮಕ್ಕೆ ಸವಾಲಾಗಿದೆ. ಇದರ ನಡುವೆ ಪತ್ರಿಕೋದ್ಯಮ ಉಳಿಸಬೇಕಿದೆ. ಮಾಧ್ಯಮಗಳಿಗೆ ಈಗ ಪತ್ರಕರ್ತರ ಬದಲಾಗಿ ಜಾಹೀರಾತು ಏಜೆಂಟರು ಬೇಕಾಗಿದ್ದಾರೆ. ಇಂತಹ ಹೊತ್ತಲ್ಲಿ ಪತ್ರಕರ್ತರು ನೈತಿಕತೆ ಕಾಪಾಡಿಕೊಳ್ಳಬೇಕು. ವೈಯಕ್ತಿಕ ಹಿತದ ಜತೆಗೆ ವೃತ್ತಿಯ ಹಿತ ಕಾಯಬೇಕಿದೆ ಎಂದರು.
ಹಿರಿಯ ಪತ್ರಕರ್ತ ಬಾ.ಮ ಬಸವರಾಜಯ್ಯ ಮಾತನಾಡಿ ಪತ್ರಿಕೋದ್ಯಮ ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳುತ್ತಿಲ್ಲ. ದೃಶ್ಯ ಮಾಧ್ಯಮಗಳು ಕನ್ನಡದ ಪದಗಳನ್ನು ನುಂಗುತ್ತಿವೆ. ಪತ್ರಿಕೆಗಳಲ್ಲೂ ಇಂಗ್ಲಿಷ್ ಪದ ನುಸುಳುತ್ತಿವೆ. ಹೀಗಾಗಿ ಪತ್ರಕರ್ತರಿಗೆ ಶುದ್ಧ ಕನ್ನಡ ಬಳಕೆ ಸಂಬಂಧ ಕಾರ್ಯಾಗಾರ ಆಗಬೇಕಿದೆ ಎಂದು ಆಶಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಪತ್ರಿಕಾ ಭವನ ನಿರ್ಮಾಣವೇ ಮುಂದಿನ ಆಶಯವಾಗಿದೆ ಎಂದು ಸಂಘದ ನೂತನ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್ ಹೇಳಿದರು. ಇದೇ ವೇಳೆ ಅವರೊಂದಿಗೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ. ಏಕಾಂತಪ್ಪ, ಎಚ್.ಬಿ.ಮಂಜುನಾಥ್, ನಾಗರಾಜ ಬಡದಾಳ್, ಬಸವರಾಜ ದೊಡ್ಮನಿ, ಎಂ.ಬಿ. ನವೀನ್, ಸದಾನಂದ ಹೆಗಡೆ, ಮಂಜುನಾಥ ಗೌರಕ್ಕಳವರ್, ಮಲ್ಲಿಕಾರ್ಜುನ ಕಬ್ಬೂರು, ಎಚ್,ಕೆ. ನಟರಾಜ್, ಆರ್.ರವಿ, ಗಣೇಶ್ ಕಮಲಾಪುರ, ಜಿಲ್ಲಾ ಕಾರ್ಯದರ್ಶಿ ಎನ್.ವಿ. ಬದರೀನಾಥ್, ಖಜಾಂಚಿ ಜೆ,.ಎಸ್. ವೀರೇಶ್, ಕೆ. ಚಂದ್ರಣ್ಣ ಇತರರಿದ್ದರು.
ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮವನ್ನು ಬ್ರಹ್ಮಾಕುಮಾರಿ ಲೀಲಾಜಿ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿ.ಸಿ. ಲೋಕೇಶ್, ಬಿ.ಎನ್. ಮಲ್ಲೇಶ್, ಇ.ಎಂ.ಮಂಜುನಾಥ್, ನಾಗರಾಜ ಬಡದಾಳ್, ಏಕಾಂತಪ್ಪ ಇತರರಿದ್ದರು.
ಶಿವಾನಂದ ತಗಡೂರು ಅವರು ಪತ್ರಕರ್ತರ ಧ್ವನಿಯಾಗಿ, ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದಾರೆ. ಅವರು ಸಂಘಕ್ಕೆ ಅಧ್ಯಕ್ಷರಾಗಿದ್ದು ಇನ್ನು ಸಾಕು. ಸರ್ಕಾರ ಮತ್ತು ಪತ್ರಕರ್ತರ ಸಮಸ್ಯೆಗಳನ್ನು ವಿಧಾನಸಭೆಗೆ ತಂದು ಪರಿಹರಿಸುವ ನಿಟ್ಟಿನಲ್ಲಿ ವಿಧಾನಪರಿಷತ್‌ಗೆ ಪ್ರವೇಶಿಸಬೇಕು ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ ಆಗಬೇಕು.