ದಾವಣಗೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನೀಟ್ ಪರೀಕ್ಷೆಯ ಪೂರ್ವಸಿದ್ಧ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಡಿಸಿ ಶೀಲವಂತ ಶಿವಕುಮಾರ್, ಎಎಸ್ಪಿ ಪರಮೇಶ್ವರ ಹೆಗಡೆ, ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಇತರ ಅಧಿಕಾರಿಗಳಿದ್ದರು.
- 13 ಕೇಂದ್ರದಲ್ಲಿ 7416 ಅಭ್ಯರ್ಥಿಗಳು
- ವಿಕಲಾಂಗರಿಗೆ ಎರಡು ಕಡೆ ವ್ಯವಸ್ಥೆ
- ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿಕೆ
ದಾವಣಗೆರೆ: ನಗರದ 13 ಕೇಂದ್ರಗಳಲ್ಲಿ ಜೂ.21ರಂದು ನಿಗದಿಪಡಿಸಲಾದ ನೀಟ್ ಪರೀಕ್ಷೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿ-ಸಿಬ್ಬಂದಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನೀಟ್ ಪರೀಕ್ಷೆಯ ಪೂರ್ವಸಿದ್ಧ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂ. 21ರ ಮಧ್ಯಾಹ್ನ 2ರಿಂದ ಸಂಜೆ 6.15ರವರೆಗೆ ಪರೀಕ್ಷೆ ನಡೆಯಲಿದ್ದು, 7416 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಮಳೆಗಾಲ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಕಟ್ಟಡದಲ್ಲಿ ನೀರು ಸೋರದಂತೆ ಪೂರ್ವ ತಪಾಸಣೆ ಮಾಡಬೇಕು. ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್, ಕುಡಿವ ನೀರು, ಗಾಳಿ ಬೆಳಕು, ಶೌಚಗೃಹ ವ್ಯವಸ್ಥೆ, ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಪ್ರಶ್ನೆ ಪತ್ರಿಕೆಗಳ ಸುರಕ್ಷತೆ ಸಾಗಣೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಪೊಲೀಸ್ ಬಂದೋಬಸ್ತ್ ಹಾಗೂ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಠಡಿಗಳಲ್ಲಿ ಗೋಡೆ ಗಡಿಯಾರದ ವ್ಯವಸ್ಥೆ ಇರಲಿದ್ದು, ಪರೀಕ್ಷಾರ್ಥಿಗಳು ಯಾವುದೇ ವಿಧವಾದ ಕೈಗಡಿಯಾರವನ್ನು ಧರಿಸುವಂತಿಲ್ಲ. ಪರೀಕ್ಷೆ ದಿನದಂದು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.
ವಿಕಲಾಂಗ ಅಭ್ಯರ್ಥಿಗಳಿಗೆ ಯುಬಿಡಿಟಿ ಕಾಲೇಜು ಮತ್ತು ಕೇಂದ್ರೀಯ ವಿದ್ಯಾಲಯದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಪರೀಕ್ಷಾರ್ಥಿಗಳ ತಪಾಸಣಾ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಜತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದರು.
ನಿಗದಿಪಡಿಸಿದ ವಸ್ತ್ರ ಸಂಹಿತೆಯನ್ನು ಪ್ರತಿ ಅಭ್ಯರ್ಥಿಯೂ ಕಡ್ಡಾಯವಾಗಿ ಪಾಲಿಸಬೇಕು. ಉದ್ದ ತೋಳಿನ ಹಾಗೂ ತಲೆ ಮುಚ್ಚುವ ಉಡುಪು ಧರಿಸಿ ಬರುವಂತಿಲ್ಲ. ಬೆಲ್ಟ್, ಟೋಪಿ, ಯಾವುದೇ ಆಭರಣ(ತಾಳಿ ಹೊರತುಪಡಿಸಿ)ಗಳನ್ನು ಧರಿಸುವಂತಿಲ್ಲ. ಶೂ ಬದಲಿಗೆ ಸಾದಾ ಚಪ್ಪಲಿ ಧರಿಸಿರಬೇಕು. ಪರೀಕ್ಷಾರ್ಥಿಗಳು, ಕೊಠಡಿಯ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದೊಳಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋಫೋನ್, ಪೇಜರ್, ವೈರ್‌ಲೆಸ್‌ಸೆಟ್, ಲಾಗ್ ಟೇಬಲ್, ಕ್ಯಾಲುಕಲೇಟರ್ ನಿಷೇಧಿಸಿದೆ. ಈ ಕುರಿತಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಎಎಸ್ಪಿ ಪರಮೇಶ್ವರ ಹೆಗಡೆ, ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.