ಮಾಯಕೊಂಡ ಹೋಬಳಿ ಹುಚ್ಚವ್ವನಹಳ್ಳಿ ಗ್ರಾಮದ ಯುವ ಪ್ರಗತಿಪರ ಕೃಷಿಕ ಜಿ.ಎಂ. ಕಲ್ಲೇಶ್ ಜಮೀನಿನಲ್ಲಿ ನಿರ್ಮಾಣ ಮಾಡಿರುವ ವಿಶಾಲವಾದ ಕೃಷಿ ಹೊಂಡ.Agricultural pond
- ಯುವ ಪ್ರಗತಿ ಪರ ಕೃಷಿಕ ಕಲ್ಲೇಶ್
- ಒಂದು ಎಕರೆಯಲ್ಲಿ ಪ್ರದೇಶದಲ್ಲಿ ಸಂಗ್ರಹಣೆ
- ಬೇಸಿಗೆಯಲ್ಲೂ ಸಮೃದ್ಧ ನೀರು
ಪಿ.ಎಚ್. ಕೃಷ್ಣಮೂರ್ತಿ, ಮಾಯಕೊಂಡ
ಬಿರು ಬೇಸಿಗೆಯಲ್ಲಿ ಕೃಷಿಗೆ ನೀರನ್ನು ಒದಗಿಸುವುದು ಸವಾಲಿನ ಕೆಲಸವೇ ಸರಿ. ಅದರಲ್ಲಿ ಹುಚ್ಚವ್ವನಹಳ್ಳಿಯ ಯುವಕನೊಬ್ಬ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ನೀರನ್ನು ಸಂಗ್ರಹಿಸಿ ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ.
ಗ್ರಾಮದ ಜಿ.ಎಂ. ಕಲ್ಲೇಶ್ ತಮ್ಮ ಜಮೀನಿನಲ್ಲಿ ಹೊಸ ಯೋಜನೆ ಹಾಕಿಕೊಂಡು ಕೃಷಿ ಮಾಡುತ್ತಿದ್ದಾರೆ. ತಮಗಿರುವ 16 ಎಕರೆ ಅಡಕೆ ತೋಟವನ್ನು ಬೇಸಿಗೆ ಕಾಲದಲ್ಲಿ ಉಳಿಸಿಕೊಳ್ಳಲು ಒಂದು ಎಕರೆ ಪ್ರದೇಶದಲ್ಲಿ ವಿಶಾಲವಾದ ಬೃಹತ್ ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆ. ಕೊಳವೆಬಾವಿಯಿಂದ ನೀರನ್ನು ಶೇಖರಿಸಿ ಜಮೀನಿಗೆ ಒದಗಿಸುತ್ತಾರೆ.
ಎಂಟತ್ತು ವರ್ಷಗಳ ಹಿಂದೆ ಸಲಿಗೆ ಬಂದಿದ್ದ 4 ಎಕರೆ ಅಡಿಕೆ ತೋಟ ಭೀಕರ ಬರದಿಂದ ನಾಶವಾಯಿತು. ತೋಟದ ಉಳಿವಿಗೆ ಪಟ್ಟ ಪ್ರಯತ್ನ ಹುಸಿಯಾಯಿತು. ಕೊರೆಸಿದ 30 ಕೊಳವೆಬಾವಿಗಳಲ್ಲಿ ನೀರು ಸಿಕ್ಕಿದ್ದು, 10ರಲ್ಲಿ ಮಾತ್ರ. ಹೀಗಾಗಿ 2017ರಲ್ಲಿ 90 * 60 ಅಡಿ ಕೃಷಿ ಹೊಂಡ ಮಾಡಿದ್ದೆವು. 2020-21ರಲ್ಲಿ ಇದನ್ನು ಒಂದು ಎಕರೆಗೆ ವಿಸ್ತರಿಸಿದ್ದರಿಂದ ಯಶಸ್ಸು ಸಿಕ್ಕಿತು ಎಂದು ಕಲ್ಲೇಶ್ ವಿವರಿಸಿದರು.
ಕೃಷಿ ಹೊಂಡದ ಅಳತೆ: 200*300 ಅಡಿಯ ಕೃಷಿಹೊಂಡ 20 ಅಡಿ ಆಳವಾಗಿದೆ. ನೀರಿನ ಶೇಖರಣೆಗೆ ಪ್ಲಾಸ್ಟಿಕ್ ತಾಡಪಾಲ್ ಹಾಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಪ್ರಸ್ತುತ ಅಡಿಕೆ, ತೇಗದ ಪ್ಲಾಂಟ್, ತೆಂಗು, ಬಾಳೆ ಬೆಳೆಯನ್ನು ಸಲಹುತ್ತಿದೆ. ಜತೆಗೆ ತೋಟದ ಮಧ್ಯೆ ಒಂದು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಸಂಸ್ಕರಣ ಘಟಕ ( ಪ್ಯಾಕ್ ಹೌಸ್) ನಿರ್ಮಿಸಲಾಗಿದೆ. ಮಳೆಗಾಲ ಹೊರತುಪಡಿಸಿ ಬೇರೆ ಸಮಯದಲ್ಲಿ ಈ ಕೃಷಿ ಹೊಂಡದ ನೀರನ್ನು ಬೆಳೆಗಳಿಗೆ ಹರಿಸಲಾಗುತ್ತದೆ.
ಮೀನು ಸಾಕಾಣಿಕೆ
ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡಿದ್ದು, ವಿವಿಧ ಜಾತಿಯ ಸುಮಾರು 10 ಸಾವಿರ ಮೀನಿನ ಮರಿಗಳು ಆದಾಯ ತಂದುಕೊಡುತ್ತಿವೆ. ಕೃಷಿ, ತೋಟಗಾರಿಕೆಯಿಂದಾಗಿ ವಾರ್ಷಿಕ 50 ಲಕ್ಷ ಆದಾಯ ಬರುತ್ತಿದ್ದು 18 ರಿಂದ 20 ಲಕ್ಷ ಖರ್ಚಾಗುತ್ತದೆ. ಉಳಿಯುವುದು ನಮ್ಮ ಲಾಭ ಎಂದು ರೈತ ಕಲ್ಲೇಶ್ ತಿಳಿಸಿದರು.
ಸಂದ ಪ್ರಶಸ್ತಿಗಳು
ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ಸಮಗ್ರ ನೀರಿನ ನಿರ್ವಹಣೆ ಮಾಡಿದ್ದಕ್ಕಾಗಿ ಜಿಲ್ಲಾ ಕೃಷಿ ಪಂಡಿತ ಪ್ರಶಸ್ತಿ, ಸೂಪರ್‌ಸ್ಟಾರ್ ರೈತ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
"
ಕೃಷಿ, ತೋಟಗಾರಿಕೆಯಲ್ಲಿ ಅಭಿವೃದ್ಧಿ ಮತ್ತು ಯಶಸ್ಸು ಕಾಣಲು ನೀರು ಶೇಖರಣೆ, ನೀರಿನ ಸದ್ಬಳಕೆ ಮತ್ತು ಶ್ರಮ, ಆಸಕ್ತಿ ಬಹಳ ಮುಖ್ಯ. ಜತೆಗೆ ಸುಧಾರಿತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ವೈಜ್ಞಾನಿಕ ಅಂಶಗಳ ಜತೆ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು.
— ಜಿ.ಎಂ. ಕಲ್ಲೇಶ್, ಪ್ರಗತಿಪರ ಯುವ ಕೃಷಿಕ, ಹುಚ್ಚವ್ವನಹಳ್ಳಿ.
ಕೃಷಿಕ ಜಿ.ಎಂ. ಕಲ್ಲೇಶ್ ಮಳೆ ನೀರು ಕೊಯ್ಲು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಉತ್ತಮವಾಗಿ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಅಂತರ ಬೆಳೆಯಾಗಿ ಕಾಳುಮೆಣಸು, ಕೃಷಿಯಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ರೈತರಿಗೆ ಮಾದರಿಯಾಗಿದ್ದಾರೆ.
— ಡಿ.ಎಂ. ಶ್ರೀಧರಮೂರ್ತಿ, ಎಡಿಎ ಕೃಷಿ ಇಲಾಖೆ, ದಾವಣಗೆರೆ.