ಚನ್ನಗಿರಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 1.34 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಶಾಸಕ ಬಸವರಾಜ್ ಶಿವಗಂಗಾ ವೀಕ್ಷಿಸಿದರು. ಎನ್.ಜೆ. ನಾಗರಾಜ್, ಸಿ.ಎಚ್. ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.Bus Stand
- ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ
- ಅಭಿವೃದ್ಧಿ ಕಾಮಗಾರಿ ವೀಕ್ಷಣೆ
ಚನ್ನಗಿರಿ: ಜಿಲ್ಲೆಯಲ್ಲೇ ಎರಡನೇ ಅತಿದೊಡ್ಡ ತಾಲೂಕು ಕೇಂದ್ರವಾಗಿರುವ ಚನ್ನಗಿರಿಗೆ ಪ್ರತಿದಿನ ಆಗಮಿಸುವ ಸಾವಿರಾರು ಪ್ರಯಾಣಿಕರ ಅನುಕೂಲಕ್ಕಾಗಿ ಸುಂದರ ಹಾಗೂ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 1.34 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ ಮಾತನಾಡಿದರು.
ಹಳೆಯ ನಿಲ್ದಾಣದಲ್ಲಿ ಯಾವುದೇ ಮೂಲಸೌಕರ್ಯಗಳಿರಲಿಲ್ಲ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತಿತ್ತು ಮತ್ತು ಬಿಸಿಲಿಗೆ ಜನರು ಹೈರಾಣಾಗಿದ್ದರು. ಈ ಕಷ್ಟವನ್ನು ಅರಿತು ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ. ಹೊಸ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಕುಡಿಯುವ ನೀರು ಮತ್ತು ಆಸನಗಳ ವ್ಯವಸ್ಥೆ ಇರಲಿದೆ ಎಂದರು.
ಈಗಾಗಲೇ ಸರ್ಕಾರಿ ಬಸ್ ನಿಲುಗಡೆಗೆ ಸೂಕ್ತ ನಿವೇಶನ ಗುರುತಿಸಲಾಗಿದೆ. ಸದ್ಯದಲ್ಲೇ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಸುಂದರವಾದ ಸರ್ಕಾರಿ ಬಸ್ ನಿಲ್ದಾಣವನ್ನೂ ನಿರ್ಮಿಸಲಾಗುವುದು. ಅಲ್ಲಿಯವರೆಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ 61 ಗ್ರಾಮ ಪಂಚಾಯಿತಿಗಳಿದ್ದು, ನಿತ್ಯ ನೂರಾರು ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಗ್ರಾಮೀಣ ಭಾಗದ ಜನರು ತಮ್ಮ ಕೆಲಸಗಳಿಗಾಗಿ ಪ್ರತಿದಿನ ಪಟ್ಟಣಕ್ಕೆ ಬರಬೇಕಾಗುತ್ತದೆ. ಜಿಲ್ಲೆಯಲ್ಲೇ ಮಾದರಿಯಾಗುವಂತಹ ಉತ್ತಮ ಮೇಲ್ಛಾವಣಿ ಮತ್ತು ಆಧುನಿಕ ಸೌಲಭ್ಯಗಳುಳ್ಳ ನಿಲ್ದಾಣವನ್ನು ಸದ್ಯದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಜೆ. ನಾಗರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಮುಖ್ಯಾಧಿಕಾರಿ ಮಂಜುನಾಥ್, ಕಾಂಗ್ರೆಸ್ ಮುಖಂಡ ಕುಮಾರ್ ಜೋಳದಾಳ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಷಡಕ್ಷರಿ, ಕಂದಾಯ ಅಧಿಕಾರಿ ರಮೇಶ್ ಇತರರಿದ್ದರು.