ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ
- ಕೆಲವೆಡೆ ಸಾಮೂಹಿಕವಾಗಿ ಅರ್ಜಿ ವಿತರಣೆ
- ಪಾರದರ್ಶಕ ಪ್ರಕ್ರಿಯೆಗೆ ಬಿಜೆಪಿ ಒತ್ತಾಯ
- ಶ್ರೀನಿವಾಸ ದಾಸಕರಿಯಪ್ಪ ಹೋರಾಟದ ಎಚ್ಚರಿಕೆ
ದಾವಣಗೆರೆ: ಎಸ್‌ಐಆರ್ ನೆಪದಲ್ಲಿ ಕಾಂಗ್ರೆಸ್, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಿಯಮ ಉಲ್ಲಂಘಿಸುತ್ತಿದೆ. ತನ್ನ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳಲು ಪ್ರಾರ್ಥನಾ ಮಂದಿರ, ಶಾಲೆ, ಅಂಗನವಾಡಿ ಇತರೆಡೆ ಎಸ್‌ಐಆರ್ ನಮೂನೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ದೂರಿದರು.
ಬಿಎಲ್‌ಒಗಳು ಮತದಾರರ ಮನೆಗಳಿಗೆ ಹೋಗದೆ ಕೆಲವೆಡೆ ಸಾಮೂಹಿಕವಾಗಿ ಫಾರ್ಮ್ ನೀಡುತ್ತಿರುವುದು ಶನಿವಾರ ಬೆಳಕಿಗೆ ಬಂದಿದೆ. ಮಾಜಿ ಸಚಿವರ ಮಿಲ್ ಹಾಗೂ ಆರನೇ ವಾರ್ಡ್‌ನ ಪಕ್ಷದ ಕಚೇರಿಯಲ್ಲೂ ಎಸ್‌ಐಆರ್ ಪ್ರಕ್ರಿಯೆ ನಡೆಸಿರುವ ಮಾಹಿತಿ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲಾಡಳಿತ, ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ದಾವಣಗೆರೆ ದಕ್ಷಿಣದಲ್ಲಿ ಪ್ರಾಮಾಣಿಕ ಮತ್ತು ನ್ಯಾಯಸಮ್ಮತವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಬೇಕು. ಅರ್ಹರು ಮತಪಟ್ಟಿಯಿಂದ ಹೊರಗಿರಬಾರದು. ಅಕ್ರಮ ವಲಸಿಗರು, ಎರಡು ಕಡೆ ಮತ ಹೊಂದಿರುವವರು ಪಟ್ಟಿಯಲ್ಲಿ ಇರಬಾರದು. ಪಾರದರ್ಶಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನು ಸೇರಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಕ್ಷಿಣ ಚುನಾವಣೆ ವೇಳೆ ಕ್ಷೇತ್ರದ 30-40 ಕಿ.ಮೀ. ಆಸುಪಾಸಿನಲ್ಲಿದ್ದವರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈಗ ಎಸ್‌ಐಆರ್‌ನಲ್ಲಿ ಅವರನ್ನು ಉಳಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಪ್ರಾಮಾಣಿಕ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಜು.6 ರಂದು(ಸೋಮವಾರ) ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಎಲ್ಲ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಪ್ರಯೋಜನ ಪಡೆಯಬೇಕು. ಅರ್ಹರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ದಾವಣಗೆರೆ ದಕ್ಷಿಣದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಅಲ್ಪಸಂಖ್ಯಾತತರು, ಬಡವರು, ಅವಿದ್ಯಾವಂತರಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಿತರು ನ್ಯಾಯಸಮ್ಮತವಾಗಿ ಎಸ್‌ಐಆರ್ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಕೆಲವು ಬಿಎಲ್‌ಎ-1ಗಳು ‘ನಾವು ಹೇಳಿದ್ದ ಕಡೆ ಬಂದು ಫಾರ್ಮ್ ತೆಗೆದುಕೊಂಡು ಹೋಗದಿದ್ದರೆ ರ್ಜಿ ಸಿಗುವುದಿಲ್ಲ. ಅದು ಯಾರಿಗೆ ಹೇಳಿದರೂ ಅಷ್ಟೇ’ ಎಂಬುದಾಗಿ ಉದ್ದಟತನದಿಂದ ಮಾತನಾಡಿದ್ದಾರೆ. ವಯೋವೃದ್ಧೆಯೊಬ್ಬರಿಗೆ ಕಾಲಭೆರವೇಶ್ವರ ದೇವಸ್ಥಾನದ ಹತ್ತಿರ ಫಾರ್ಮ್ ತೆಗೆದು ಕೊಂಡು ಹೋಗುವಂತೆ ಹೇಳಿದ್ದಾರೆ.ಈ ಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ ಪಿಂಚಣಿ ಇತರೆ ಸರ್ಕಾರಿ ಸೌಲಭ್ಯಗಳೂ ದೊರೆಯದು ಎಂದರು.
ನಾವು ಬಿಜೆಪಿ ಪರ ಕೆಲಸ ಮಾಡುವಂತೆ ಹೇಳುತ್ತಿಲ್ಲ. ಪ್ರಾಮಾಣಿಕರ ಮತಗಳ ಕಳೆಯಬೇಡಿ. ಕಳ್ಳರು, ಅಕ್ರಮ ವಲಸಿಗರು, ಬಾಂಗ್ಲಾ ದೇಶದವರು, ಎರಡು ಕಡೆ ಮತಗಳ ಹೊಂದಿರುವವರನ್ನ ಸೇರಿಸಬೇಡಿ ಎಂದು ಹೇಳುತ್ತಿದ್ದೇವೆ. ಹಿಂದೂಗಳು, ಮುಸ್ಲಿಮರು ಯಾರೇ ಆಗಿರಲಿ ಅರ್ಹರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬಾರದು ಎಂದು ಒತ್ತಾಯಿಸಿದರು.
ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಬಿಜೆಪಿ ಪ್ರವೇಶ ಸಿಗದು ಎಂದು ಕಾಂಗ್ರೆಸಿಗರು ಆಟ ಆಡುತ್ತಿದ್ದಲ್ಲಿ ಅದಕ್ಕೆ ತಿಲಾಂಜಲಿ ಇಡಲಾಗುವುದು. ಜಿಲ್ಲಾಡಳಿತ ನ್ಯಾಯಯುತ ಎಸ್‌ಐಆರ್ ನಡೆಸಬೇಕು ಎಂದು ಮನವಿ ಮಾಡಿದರು. ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ರಾಜು ನೀಲಗುಂದ, ಬಾಬಣ್ಣ, ಗುರು ಸೋಗಿ, ವೀರಣ್ಣ ಇತರರಿದ್ದರು.