ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಸೋಮವಾರ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಸುರೇಂದ್ರನಾಯ್ಕ, ಕುಬೇಂದ್ರಪ್ಪ, ಮಂಜುನಾಥ ನೆಲಹೊನ್ನೆ, ಅರಕೆರೆ ನಾಗರಾಜ್ ಇತರರಿದ್ದರು.Meeting
- ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ
- ಕಾರ್ಯಕರ್ತರ ಸಭೆ
ಹೊನ್ನಾಳಿ: ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮತದಾರರು ಮುಂದಿನ ಎಲ್ಲ ಹಂತಗಳಲ್ಲಿನ ಚುನಾವಣೆಯಲ್ಲಿ ಮನೆಗೆ ಕಳುಹಿಸಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಭವಿಷ್ಯ ನುಡಿದರು.
ಪಟ್ಟಣದ ಗುರುಭವನದಲ್ಲಿ ಸೋಮವಾರ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿಯಲ್ಲಿದ್ದ ಅನೇಕ ಲೋಪದೋಷ ನಿವಾರಿಸಿ ಬಡವರಿಗೆ ಅನುಕೂಲವಾಗುವಂತೆ ವಿಬಿಜಿ ರಾಮ್‌ಜಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಪ್ರಗತಿಗೆ ಪ್ರೇರಕವಾಗಿದ್ದು, ಈ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.
ಈ ಹಿಂದೆ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಆಧಿಕಾರ ನಡೆಸಿದೆ. ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕೆಲವು ತಾತ್ವಿಕ ಕಾರಣಗಳಿಂದ ನಾವು ಸೋತಿದ್ದೇನೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗೆಲುವಿನ ಸಂಕಲ್ಪ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನಮ್ಮ ಬಗ್ಗೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ. ರಾಜ್ಯದಲ್ಲಿ ಹಗರಣಮುಕ್ತ ಸರ್ಕಾರವನ್ನು ಜನತೆ ಬಯಸುತ್ತಿದೆ. ಆದರೆ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿ ಅಭಿವೃದ್ಧಿ ಕಾರ್ಯಗಳಿಂದ ವಿಮುಖವಾಗಿ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಜಿಪಂ ಮಾಜಿ ಸದಸ್ಯ ಸುರೇಂದ್ರನಾಯ್ಕ, ಒಬಿಸಿ ಮುಖಂಡ ಕುಬೇಂದ್ರಪ್ಪ, ಜಿಲ್ಲಾ ಮುಖಂಡ ಮಂಜುನಾಥ ನೆಲಹೊನ್ನೆ, ಜೆ.ಕೆ. ಸುರೇಶ್, ಪಪಂ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್ ಮಾತನಾಡಿದರು. ಮುಖಂಡರಾದ ಡಿ.ಜಿ. ರಾಜಪ್ಪ, ಸಿ.ಆರ್. ಶಿವಾನಂದ, ಎಂ.ಎಸ್. ಫಾಲಾಕ್ಷಪ್ಪ, ಮಾರುತಿ ನಾಯ್ಕ, ಮಂಜು ಇಂಚರ, ಕೆ. ರಂಗಪ್ಪ, ಶಿವುಹುಡೇದ್, ಲಿಂಗರಾಜ್, ಹವಳದ್, ರಮೇಶ್ ಗೌಡ, ಸುನಿಲ್, ನ್ಯಾಮತಿ ರವಿಕುಮಾರ್, ಬಡಾವಣೆ ರಂಗಪ್ಪ, ಪೇಟೆ ಪ್ರಶಾಂತ್ ಇತರರಿದ್ದರು.