ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದಿಂದ ಆರಂಭವಾದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಮುಖಂಡರಾದ ಮುದೇಗೌಡ್ರ ಗಿರೀಶ್, ಮಾಗಾನಹಳ್ಳಿ ಪರಶುರಾಮ್, ರತ್ನಾಬಾಯಿ, ಬೂದಾಳ್ ಬಾಬು, ಮೇಕಾ ಮುರಳೀಕೃಷ್ಣ ಇತರರು ಹೆಜ್ಜೆ ಹಾಕಿದರು.  
ದಾವಣಗೆರೆ

ಮನರೇಗಾ ಉಳಿವಿಗಾಗಿ ಕಾಂಗ್ರೆಸ್ ಕಾಲ್ನಡಿಗೆ

ಪ್ರಮುಖ ಮುಖ್ಯಾಂಶಗಳು

  • ಅರಸಾಪುರದಲ್ಲಿ ಸಂಸದೆ ಡಾ. ಪ್ರಭಾ ಚಾಲನೆ
  • 5 ಕಿ.ಮೀ. ಯಾತ್ರೆ ಕ್ರಮಿಸಿದ ಮುಖಂಡರು
  • ಹಳ್ಳಿಗಳಲ್ಲಿ ವಿಬಿ ಜಿ ರಾಮ್ ಯೋಜನೆ ವಿರುದ್ಧ ಜಾಗೃತಿ
ದಾವಣಗೆರೆ: ಮನರೇಗಾ ಯೋಜನೆ ಉಳಿಸಿ ಬಲಪಡಿಸುವ ಉದ್ದೇಶದಡಿ, ಜನರಲ್ಲಿ ಮನವರಿಕೆ ಮಾಡುವ ಉದ್ದೇಶದಿಂದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಕಾಂಗ್ರೆಸ್‌ನಿಂದ ಭಾನುವಾರ ಪಾದಯಾತ್ರೆ ನಡೆಸಲಾಯಿತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಲೆ ಮೇಲೆ ಪ್ಲಾಸ್ಟಿಕ್ ಪುಟ್ಟಿ ಹೊತ್ತು ಸಾಂಕೇತಿಕ ಚಾಲನೆ ನೀಡಿದರು. ಅವರ ನೇತೃತ್ವದಲ್ಲಿ ಅರಸಾಪುರ ಗ್ರಾಮದಿಂದ ಆರಂಭವಾದ ಕಾಲ್ನಡಿಗೆ ಮೂಲಕ ಐದು ಕಿಮೀವರೆಗೆ ಹೆಜ್ಜೆ ಹಾಕಿದ ಮುಖಂಡರು, ಕಾರ್ಯಕರ್ತರು ಮನರೇಗಾ ಯೋಜನೆ ಪರ ಘೋಷಣೆ ಕೂಗಿದರು.
ಈ ಪಾದಯಾತ್ರೆ ಕಡ್ಲೇಬಾಳು, ಚಿಕ್ಕ ಓಬಜ್ಜಿಹಳ್ಳಿ, ವಾಲ್ಮೀಕಿ ನಗರ ಗ್ರಾಮಗಳಿಗೆ ಸಾಗಿತು. ಗ್ರಾಮೀಣ ಕಾರ್ಮಿಕರ ಹಕ್ಕುಗಳು ಮತ್ತು ಜೀವನಾಧಾರವಾದ ಮನರೇಗಾ ಯೋಜನೆಯ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ವಿ.ಬಿ. ಜಿ ರಾಮ್ ಜಿ ಯೋಜನೆ ಸಾಮಾನ್ಯ ಜನರ ಹಿತಾಸಕ್ತಿಗೆ ಧಕ್ಕೆ ತರಲಿದೆ. ಜನರ ಬದುಕಿಗೆ ತೊಂದರೆ ತರುವ ಈ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ 2005ರಲ್ಲಿ ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆ ಗ್ರಾಮೀಣ ಭಾಗದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಬಲ ನೀಡಿತ್ತು.
ಇದೀಗ ಮಹಾತ್ಮ ಗಾಂಧಿ ಹೆಸರನ್ನು ಕೇಂದ್ರ ಸರ್ಕಾರ ಕೈಬಿಡುವ ಮೂಲಕ ಗೊಂದಲ ಸೃಷ್ಟಿಸಿದೆ. ಇದರ ಮೂಲಕ ಮತ್ತೆ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಲಾಗಿದೆ. ಯುಪಿಎ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ದು ಮಾಡಿ ಉದ್ಯೋಗದ ಹಕ್ಕು ಕಸಿದಿರುವುದು ಸಂವಿಧಾನ ಬಾಹಿರ ಕೆಲಸ ಎಂದು ದೂರಿದರು.
ದೇಶದ 28 ಕೋಟಿ ಬಡಜನರಿಗೆ ಇದರಿಂದ ಅನ್ಯಾಯವಾಗಿದೆ. ನಾವು ಈ ಅನ್ಯಾಯದ ವಿರುದ್ಧ ತೀವ್ರ ಹೋರಾಟ ಮಾಡಲಿದ್ದು, ಇದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಬಿಜೆಪಿ ಸಹಿಸದೇ ಇಂತಹ ಷಡ್ಯಂತ್ರ ರೂಪಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪರಶುರಾಮ್ ಮಾಗಾನಹಳ್ಳಿ ಮಾತನಾಡಿ ಮನರೇಗಾ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಇದರ ಉದ್ದೇಶ. ಇದರಿಂದ ನೂರು ದಿನ ಕಡ್ಡಾಯವಾಗಿ ಉದ್ಯೋಗ ಸಿಗುತ್ತಿತ್ತು. ಈ ಹಕ್ಕನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ ಎಂದು ದೂರಿದರು.
ಪಾದಯಾತ್ರೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ್, ತಾಪಂ ಮಾಜಿ ಅಧ್ಯಕ್ಷ ಮೇಕಾ ಮುರುಳಿಕೃಷ್ಣ, ರಾಘವೇಂದ್ರ ನಾಯ್ಕ, ಅಯೂಬ್ ಪೈಲ್ವಾನ್, ಜಿಪಂ ಮಾಜಿ ಸದಸ್ಯರಾದ ರೇಣುಕಮ್ಮ ಕರಿಬಸಪ್ಪ, ಬಾತಿ ಟಿ.ಅಂಜಿಬಾಬು, ಎ.ಬಿ. ಪ್ರಭಾಕರ್, ಬಾತಿ ಉಮೇಶ್, ಕಡ್ಲೆಬಾಳು ಪ್ರಭು, ಅಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾಬಾಯಿ, ಮಾಗಾನಹಳ್ಳಿ ರಾಜಣ್ಣ, ವಿ.ಸತ್ಯನಾರಾಯಣ್, ಬಾತಿ ಸಿದ್ದಲಿಂಗಪ್ಪ, ಬೂದಾಳ್ ಬಾಬು, ಕೆ.ಜಿ.ಶಾಂತರಾಜ್, ಕಾಡಜ್ಜಿ ಚಂದ್ರಣ್ಣ, ಚಮನ್‌ಸಾಬ್ ಇತರರು ಪಾಲ್ಗೊಂಡಿದ್ದರು.