ದಾವಣಗೆರೆ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ರೈತರು ಟ್ರ್ಯಾಕ್ಟರ್ ಲೋಡ್‌ನೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮಹೇಶ್ ಅವರು ರೈತರೊಂದಿಗೆ ಚರ್ಚಿಸಿದರು. ಕೊಳೇನಹಳ್ಳಿ ಬಿ.ಎಂ. ಸತೀಶ್, ತುಂಬಿಗೆರೆ ದಿನೇಶಗೌಡ್ರು, ಐಗೂರು ಸಿ.ನಾಗರಾಜಪ್ಪ, ಆಲೂರು ದೇವರಾಜು, ಸಿದ್ದೇಶ್, ಮರಿಕುಂಟೆ ಚಂದ್ರಪ್ಪ ಪಾಲ್ಗೊಂಡಿದ್ದರು.  
ದಾವಣಗೆರೆ

ಮೆಕ್ಕೆಜೋಳ ಖರೀದಿ ಗೊಂದಲ

ಪ್ರಮುಖ ಮುಖ್ಯಾಂಶಗಳು

  • ಟ್ರ್ಯಾಕ್ಟರ್ ಲೋಡ್‌ನೊಂದಿಗೆ ರೈತರ ಪ್ರತಿಭಟನೆ
  • ಜಿಲ್ಲಾಡಳಿತ ಜಾಣ ಕುರುಡುತನ
ದಾವಣಗೆರೆ : ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಗೊಂದಲ ಮುಂದುವರಿದಿದ್ದು, ಇದರಿಂದ ರೋಸಿ ಹೋದ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್ ಲೋಡ್‌ನೊಂದಿಗೆ ಬಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಕೃಷಿ ಇಲಾಖೆಯವರು ಮೆಕ್ಕೆಜೋಳ ಗುಣಮಟ್ಟ ಪರೀಕ್ಷೆ ನಡೆಸಬೇಕು. ಆದರೆ ಖರೀದಿಸುವ ಪಶು/ಕೋಳಿ ಆಹಾರ ಉತ್ಪಾದಕರು ಗುಣಮಟ್ಟ ಪರೀಕ್ಷೆ ನಡೆಸಿ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು ಎಂಬಂತೆ ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸುತ್ತಾರೆ.
ಇದರಿಂದ ಟ್ರ್ಯಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಬಂದ ರೈತರು ಏನು ಮಾಡಬೇಕು ಎಂದು ತೋಚದೇ ಕಂಗಾಲಾಗಿದ್ದಾರೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಜಿಲ್ಲಾಡಳಿತ ಜಾಣ ಕುರುಡುತನ ಅನುಸರಿಸಿದೆ ಎಂದು ಆರೋಪಿಸಿದರು.
ಕುಕ್ಕುವಾಡ ಸಕ್ಕರೆ ಕಂಪನಿ ಡಿಸ್ಟಿಲರಿಯವರು 729.5 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಅದು ಪಾಲನೆಯಾಗಿಲ್ಲ. ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿಲ್ಲ ಎಂದು ಖಂಡಿಸಿದರು.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮತ್ತು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಮಹೇಶ್, ಪಶು/ಕೋಳಿ ಆಹಾರ ಉತ್ಪಾದಕರಿಗೆ ಖರೀದಿಸುವಂತೆ ಸೂಕ್ತ ಆದೇಶ ನೀಡಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರೈತರಾದ ತುಂಬಿಗೆರೆ ದಿನೇಶಗೌಡ್ರು, ಐಗೂರು ಸಿ.ನಾಗರಾಜಪ್ಪ, ಆಲೂರು ದೇವರಾಜು, ಸಿದ್ದೇಶ್, ಮರಿಕುಂಟೆ ಚಂದ್ರಪ್ಪ ಪಾಲ್ಗೊಂಡಿದ್ದರು.