ಬಸವಾಪಟ್ಟಣ ಗ್ರಾಮದ ರಾಘವೇಂದ್ರ ಪ್ರೌಢಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್. ಹಾಲೇಶ್ ಉದ್ಘಾಟಿಸಿದರು. ಎಲ್. ಜಯಣ್ಣ, ಎಲ್.ಜಿ. ಮಧುಕುಮಾರ್, ಡಾ.ಎಂ.ಈ. ಶಿವಕುಮಾರ್, ಎನ್.ಆರ್. ಸುಧಾಕರ್ ಇತರರಿದ್ದರು.inspiration camp
- ಪ್ರಾಧ್ಯಾಪಕ ಡಾ.ಎಂ.ಈ. ಶಿವಕುಮಾರ್ ಹೊನ್ನಾಳಿ ಹೇಳಿಕೆ
- ಪ್ರೇರಣಾ ಶಿಬಿರದ ಕಾರ್ಯಕ್ರಮ
- ವಿದ್ಯಾರ್ಥಿಗಳು ತ್ಯಜಿಸಬೇಕು ಸೋಮಾರಿತನ
ಬಸವಾಪಟ್ಟಣ: ಪಾಠಗಳನ್ನು ಗಮನವಿಟ್ಟು ಆಲಿಸಿ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಬೇಕು. ಕಠಿಣ ವಿಷಯಗಳಿಗೆ ಹೆಚ್ಚು ಸಮಯ ನೀಡಿ, ಪರೀಕ್ಷಾ ನಮೂನೆಗಳನ್ನು ಅರ್ಥಮಾಡಿಕೊಂಡು ಆತ್ಮವಿಶ್ವಾಸದಿಂದ ಮುನ್ನ್ನಡೆಯಬೇಕು. ಅದೇ ಪರೀಕ್ಷೆಯ ಯಶಸ್ಸಿನ ಕೀಲಿ ಕೈಯಾಗುತ್ತದೆ ಎಂದು ರಾಣೆಬೆನ್ನೂರು ಎಸ್‌ಟಿಜೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಈ. ಶಿವಕುಮಾರ್ ಹೊನ್ನಾಳಿ ತಿಳಿಸಿದರು.
ಗ್ರಾಮದ ರಾಘವೇಂದ್ರ ಪ್ರೌಢಶಾಲೆಯಲ್ಲಿ ಶುಕ್ರವಾರ ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು, ಅಧ್ಯಯನದ ಯೋಜನೆ ತಯಾರಿಸಿಕೊಂಡು ಯಶಸ್ಸಿನ ಮೆಟ್ಟಿಲನ್ನು ಹತ್ತಬೇಕು. ಆಗ ಮಾತ್ರ ಹೆತ್ತವರ ಕನಸನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಸೋಮಾರಿತನ ತ್ಯಜಿಸಿ, ಉತ್ತಮ ಗುರಿಗಳ ನಿರ್ವಹಣೆಯೊಂದಿಗೆ ನಿರಂತರ ಕಲಿಕೆಯಲ್ಲಿ ತೊಡಗಿದಾಗ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್. ಹಾಲೇಶ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸದ ಪ್ರೇರೇಪಣೆಗಾಗಿ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ಈ ಕಾರ್ಯಕ್ರಮವು ಸಮಯೋಚಿತ ನಿರ್ಧಾರವಾಗಿದೆ ಎಂದರು.
ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಆರ್. ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಪ್ರಾಸ್ತಾವಿಕ ನುಡಿದರು. ಅಕ್ಷರ ದಾಸೋಹ ಅಧಿಕಾರಿ ಡಿ.ಬಿ. ಉಮೇಶ್, ಗ್ರಾಪಂ ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ. ಜಯಣ್ಣ, ಡಿ.ಜಿ. ರಾಮಚಂದ್ರಪ್ಪ, ಮುಖ್ಯಶಿಕ್ಷಕರಾದ ಕೆ. ಶಾಂತರಾಜ್, ಹರಿಹರ ಪಟಗಾರ್, ಬೆನಕೇಶ್ ಮತ್ತಿತರರು ಇದ್ದರು.