ದಾವಣಗೆರೆ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ಬಿಸಿಎ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ತಜ್ಞ ಎ.ಎಚ್.ಸಾಗರ್, ಡಾ. ಅಥಣಿ ಎಸ್. ವೀರಣ್ಣ, ಡಾ.ಬಿ ವೀರಪ್ಪ, ಡಾ. ಸ್ವಾಮಿ ತ್ರಿಭುವನಾನಂದ ಇತರರಿದ್ದರು.
- ಶಿಕ್ಷಣ ತಜ್ಞ ಎ.ಎಚ್.ಸಾಗರ್ ಅನಿಸಿಕೆ
- ಸುರಕ್ಷಿತ ವಲಯ ಬಿಟ್ಟು ಸವಾಲು ಸ್ವೀಕರಿಸಿ
- ಬಾಪೂಜಿ ಹೈಟೆಕ್ ಕಾಲೇಜಿನ ಪದವಿ ಪ್ರದಾನ
ದಾವಣಗೆರೆ: ಮೊಬೈಲ್‌ಗಳನ್ನೇ ಹೆಚ್ಚು ಅವಲಂಭಿಸಿದ ಇಂದಿನ ಯುವಜನರ ಹಾದಿ ತಪ್ಪಿಸಿ ಲಾಭ ಮಾಡಿಕೊಳ್ಳುವ ಕಂಪನಿಗಳ ಪ್ರವೃತ್ತಿಯು ಔದ್ಯಮಿಕ ರಂಗದಲ್ಲಿ ಹೆಚ್ಚಿದೆ ಎಂದು ಶಿಕ್ಷಣ ತಜ್ಞ ಎ.ಎಚ್.ಸಾಗರ್ ಹೇಳಿದರು.
ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ಬಿಸಿಎ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಿತ ವಿಷಯದಿಂದ ಬೇರೆ ವಿಷಯಗಳ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವಿದ್ದರೆ ಮಾತ್ರ ಮುಂದೆ ಭವಿಷ್ಯವಿದೆ. ಇದಕ್ಕಾಗಿ ವಿಮರ್ಶಾತ್ಮಕ ಚಿಂತನೆ ಮಾಡುವುದನ್ನು ರೂಡಿಸಿಕೊಳ್ಳಬೇಕು. ಸುರಕ್ಷಿತ ವಲಯದಿಂದ ಹೊರಬಂದು ಸವಾಲುಗಳನ್ನು ಸ್ವೀಕರಿಸಬೇಕು. ಜ್ಞಾನಾರ್ಜನೆಯ ವಲಯದಿಂದ ಪ್ರಗತಿ ಕಾಣಬಹುದು ಎಂದು ಹೇಳಿದರು.
ಶೈಕ್ಷಣಿಕ ದೆಸೆಯಲ್ಲಿ ಪಠ್ಯ ವಿಷಯಗಳನ್ನು ಪ್ರೀತಿಸಬೇಕೇ ಹೊರತು ಹುಡುಗ ಹುಡುಗಿಯರನ್ನಲ್ಲ. ಮನೋದ್ವೇಗಗಳಿಂದ ಉಂಟಾಗುವ ಸಮಸ್ಯೆಗಳಿಗೆ ಹಾಸ್ಯಪ್ರಜ್ಞೆಯು ಪರಿಹಾರವಾಗಲಿದೆ. ಭಾಷೆಗಳನ್ನು ಸರಿಯಾಗಿ ಕಲಿಯದಿದ್ದಲ್ಲಿ ಮತ್ತೊಬ್ಬರು ಹೇಳಿದ್ದನ್ನೇ ಒಪ್ಪಬೇಕಾಗುತ್ತದೆ ಎಂದು ವಿವರಿಸಿದರು.
ಕಾಲೇಜಿನ ಅಧ್ಯಕ್ಷ, ಲೆಕ್ಕಪರಿಶೋಧಕ ಡಾ. ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಬಿ ವೀರಪ್ಪ, ಡಾ. ಸ್ವಾಮಿ ತ್ರಿಭುವನಾನಂದ ಇದ್ದರು. ರ‌್ಯಾಂಕ್ ವಿಜೇತರನ್ನು ಗೌರವಿಸಲಾಯಿತು. ಶ್ರಾವಣಿ ಹಾಗೂ ಅವರ ತಂಡ ಪ್ರಾರ್ಥನೆ ಹಾಡಿದರೆ ಬಿ.ಎಂ. ಪ್ರಶಾಂತಿನಿ ಸ್ವಾಗತಿಸಿದರು. ಎಂ.ಎಸ್. ಪೂಜಾ ವಂದಿಸಿದರು.