ಬಸಾಪುರ ಸರ್ಕಾರಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಶಾಸಕ ಸಮರ್ಥ್ ಶಾಮನೂರು ಉದ್ಪಾಟಿಸಿದರು. ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಡಿಡಿಪಿಐ ಕೃಷ್ಣ ಪ್ರಸಾದ್, ಗೀತಾ, ವಿಶಾಲಾಕ್ಷಿ, ಬಾ.ಮ.ಬಸವರಾಜಯ್ಯ ಇದ್ದರು.
- ಬಸಾಪುರ ಸ್ಕೂಲ್ ಮೈದಾನ ನಿರ್ಮಾಣಕ್ಕೆ ಕ್ರಮ
- ಶಾಸಕ ಸಮರ್ಥ್ ಶಾಮನೂರು ಹೇಳಿಕೆ
- ವಿದ್ಯಾದೇಗುಲಗಳ ಪ್ರಾರಂಭೋತ್ಸವಕ್ಕೆ ಚಾಲನೆ
ದಾವಣಗೆರೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಮಾದರಿ ಶಿಕ್ಷಣ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಬಸಾಪುರ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ, ಪಾಲಕರು- ಶಿಕ್ಷಕರ ಮಹಾಸಭಾ ಕಾರ್ಯಕ್ರಮ ಉದ್ಪಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಶಿಕ್ಷಣದ ಪ್ರಗತಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಬಸಾಪುರ ಶಾಲೆಯ ನೂತನ ಕಾಂಪೌಂಡ್, ಎರಡು ನೂತನ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಲಾಗಿತ್ತು. ಸಾರ್ವಜನಿಕರ ಬೇಡಿಕೆಯಂತೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ನಡೆದಿದೆ ಎಂದರು. ಮುಂಬರುವ ದಿನಗಳಲ್ಲಿ ಅಗತ್ಯವಿರುವ ಇನ್ನೆರಡು ಹೆಚ್ಚುವರಿ ತರಗತಿ ಕೊಠಡಿಗಳನ್ನು ಮಂಜೂರು ಮಾಡಲಾಗುವುದು ಎಂದರು.
ಶಾಲಾವರಣದಲ್ಲಿ ಸುಸಜ್ಜಿತವಾದ ಆಟದ ಮೈದಾನ ಹಾಗೂ ಬಸಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದೂ ಭರವಸೆ ನೀಡಿದರು.
ಶಾಲೆಯ ಪ್ರಗತಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಗ್ರಾಮಸ್ಥರು ಇದಕ್ಕೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸೌಲಭ್ಯ ಬಳಸಿ ಶ್ರದ್ಧೆಯಿಂದ ಓದಿ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚಿನ ಉತ್ತೇಜನ, ಪ್ರೋತ್ಸಾಹ ಹಾಗೂ ಉತ್ಸಾಹ ತುಂಬಬೇಕಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕಾಗಿಪಾಲಕರು ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಸರ್ಕಾರಿ ಶಾಲೆಗಳು ಉತ್ತಮಪಡಿಸುವುದೇ ಪರ್ಯಾಯವಾಗಿದೆ ಎಂದರು.
ಐ.ಎ.ಎಸ್, ಐ.ಪಿ.ಎಸ್ , ಕಂದಾಯ ಸೇವೆ, ನಾಸಾ ಮತ್ತು ಇಸ್ರೋದಂತಹ ಸಂಸ್ಥೆಗಳಲ್ಲಿರುವ ವಿಜ್ಞಾನಿಗಳು, ಪ್ರಖ್ಯಾತ ವೈದ್ಯರು ಮತ್ತು ಇಂಜಿನಿಯರ್‌ಗಳು ಸರ್ಕಾರಿ ಶಾಲೆಗಳಲ್ಲೇ ಓದಿದ್ದಾರೆ. ಸಾಧನೆಗೆ ಶಾಲಾ ಕಟ್ಟಡಕ್ಕಿಂತಲೂ ಶ್ರಮ ಮುಖ್ಯ ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಸ್ಥಾನಕ್ಕೇರಲು ಸಾಧ್ಯವಿಲ್ಲ ಎಂಬ ಭ್ರಮೆಯಿಂದ ಹೊರಬರಬೇಕು ಎಂದು ತಿಳಿಸಿದರು.
ಖಾಸಗಿ, ಸರ್ಕಾರಿ ಶಾಲೆಗಳ ನಡುವಿನ ತಾರತಮ್ಯದ ಭಾವನೆ ಮೊದಲು ಪಾಲಕರ ಮನಸ್ಸಿನಿಂದ ದೂರಾಗಬೇಕು. ಸರ್ಕಾರಿ ಶಾಲೆಗಳು ಬಡವರ ಶಾಲೆಗಳಲ್ಲ, ಅವು ನಮ್ಮ ಹಕ್ಕು ಮತ್ತು ಗುಣಮಟ್ಟದ ಶಿಕ್ಷಣದ ಕೇಂದ್ರಗಳು ಎಂಬ ಭಾವನೆ ಸಮಾಜದಲ್ಲಿ ಮೂಡಬೇಕಿದೆ ಎಂದು ಆಶಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಎಲ್.ಕೆ.ಜಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
ನೂತನ ಡಿಡಿಪಿಐ ಕೃಷ್ಣ ಪ್ರಸಾದ್, ಡಯಟ್ ಪ್ರಾಚಾರ್ಯೆ ಗೀತಾ, ಬಿಇಒ ವಿಶಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ, ವಿವಿಧ ಶಾಲೆಗಳ ಶಿಕ್ಷಕರಿದ್ದರು.