ಕಟ್ಟಡ ತೆರವು ಕಾರ್ಯಾಚರಣೆಯನ್ನು ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್,ಪುರಸಭಾ ಮುಖ್ಯಾಧಿಕಾರಿ ಲೀಲಾವತಿ, ಇಂಜಿನಿಯರ್ ದೇವರಾಜ್ ವೀಕ್ಷಿಸಿದರು.
- ಮುಂಜಾನೆಯೇ ಹೊನ್ನಾಳಿ ಪಟ್ಟಣದಲ್ಲಿ ಜೆಸಿಬಿಗಳ ಸದ್ದು
- ಪುರಸಭೆ ಮಳಿಗೆಗಳ ನೆಲಸಮ
- ಕಟ್ಟಡ ಮಾಲಿಕರಿಗೆ ಪರಿಹಾರ
ಹೊನ್ನಾಳಿ: ಗದಗ-ಹೊನ್ನಾಳಿ ಚತುಷ್ಪಥ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಪಟ್ಟಣದಲ್ಲಿ ಜೆಸಿಬಿಗಳ ಸದ್ದು ಜೋರಾಗಿತ್ತು. ಅಧಿಕಾರಿಗಳ ನೇತೃತ್ವದಲ್ಲಿ ಪುರಸಭೆಗೆ ಸೇರಿದ ಮಳಿಗೆಗಳು ಹಾಗೂ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು.
ಖಾಸಗಿ ಬಸ್ ನಿಲ್ದಾಣ ಸಮೀಪದ ಪುರಸಭೆ ಮಳಿಗೆಗಳನ್ನು ಗುರುವಾರ ತೆರವು ಗೊಳಿಸಲಾಯಿತು.
ಇದಕ್ಕೂ ಮುನ್ನ ಬುಧವಾರ ತುಮ್ಮಿನಕಟ್ಟೆ ರಸ್ತೆ ರಾಜಮಾರ್ಗ ಮತ್ತು ಪುರಸಭೆ ಮಳಿಗೆ ವರ್ತಕರಿಗೆ ಕಟ್ಟಡ ತೆರವುಗೊಳಿಸಲು ಹಾಗೂ ಸರಕುಗಳನ್ನು ಸ್ಥಳಾಂತರಿಸಲು ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ ಕುಮಾರ್, ಸಿಪಿಐ ಸುನಿಲ್‌ಕುಮಾರ್ ಸೂಚಿಸಿದ್ದರು.
ಅದರಂತೆ ಕೆಶಿಪ್ ಅಧಿಕಾರಿಗಳ ಸಮ್ಮುಖದಲ್ಲಿ ಯಾವುದೇ ವಿರೋಧವಿಲ್ಲದೆ ಗುರುವಾರ ತೆರವು ಕಾರ್ಯಾಚರಣೆ ನಡೆಯಿತು.
ಈಗಾಗಲೇ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಕಟ್ಟಡ ಮಾಲಿಕರಿಗೆ ಪರಿಹಾರ ನೀಡಲಾಗಿದೆ. ಕೆಲವರು ತಾವಾಗಿಯೇ ತೆರವು ಮಾಡಿಕೊಂಡಿದ್ದರು. ಉಳಿದವನ್ನು ಅಧಿಕಾರಿಗಳು ತೆರವುಗೊಳಿಸಿದರು.
ವರ್ತಕರ ಅಳಲು
ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಆಗಮಿಸಿದ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪರಿಶೀಲಿಸಿದರು.
ಈ ವೇಳೆ ವರ್ತಕರು, ಸ್ವಲ್ಪ ಜಾಗ ಬಿಟ್ಟು ಕಟ್ಟಡ ತೆರವು ಮಾಡಿ. ನಮಗೆ ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ನಮ್ಮ ಬದುಕು ಬೀದಿಗೆ ಬರುತ್ತದೆ ಎಂದು ಮನವಿ ಮಾಡಿದರು.
ಸ್ಪಂದಿಸಿದ ಮಂಜಪ್ಪ, ಇದನ್ನೇ ನಂಬಿ ಬದುಕುತ್ತಿದ್ದಾರೆ. ಯಾರಿಗೂ ತೊಂದರೆ ಆಗದಂತೆ, ಸಾಧ್ಯವಾದಷ್ಟು ಮಾನವೀಯ ನೆಲೆಯಲ್ಲಿ ಅಲ್ಪಸ್ವಲ್ಪ ಜಾಗ ಬಿಟ್ಟು ತೆರವು ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೆಶಿಪ್ ಎಇಇ ಪರಮೇಶ್ವರ ನಾಯ್ಕ ಮಾತನಾಡಿ, ಮಧ್ಯ ರಸ್ತೆಯಿಂದ 11.5 ಮೀ. ಅಗಲೀಕರಣ ಮಾಡಲಾಗುವುದು. ಎ.ಕೆ.ಕಾಲನಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ಕಟ್ಟಡಗಳಿಗೆ ಈಗಾಗಲೇ ಎರಡು ಕಂತುಗಳಲ್ಲಿ ಪರಿಹಾರ ವಿತರಿಸಲಾಗಿದೆ. ಒಂದೆರಡು ಪ್ರಕರಣಗಳು ನ್ಯಾಯಾಲಯದಲ್ಲಿವೆ, ಅವೂ ಶೀಘ್ರ ಇತ್ಯರ್ಥವಾಗಲಿವೆ ಎಂದರು.
ಬಿಗಿ ಪೊಲೀಸ್ ಬಂದೋಬಸ್ತ್: ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೇತೃತ್ವದಲ್ಲಿ ಹೊನ್ನಾಳಿ, ನ್ಯಾಮತಿ, ಬಸವಾಪಟ್ಟಣ ಠಾಣೆ ಪೊಲೀಸರು ಹಾಗೂ ಡಿಆರ್ ತುಕಡಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್, ಮುಖ್ಯಾಧಿಕಾರಿ ಲೀಲಾವತಿ, ಇಂಜಿನಿಯರ್ ದೇವರಾಜ್, ಸಿಪಿಐ ಸುನಿಲ್ ಕುಮಾರ್, ಪಿಎಸ್‌ಐ ಕುಮಾರ್, ಎಎಸ್‌ಐ ಹರೀಶ್, ಕೆಶಿಪ್ ಅಧಿಕಾರಿಗಳಾದ ಪರಮೇಶ್ವರ್ ನಾಯ್ಕ, ಮಂಜುನಾಥ್, ಜೆಇ ಶಶಿಕಲಾ ಮತ್ತಿತರರು ಇದ್ದರು.
ಪ್ರತಿಭಟನೆ ಎಚ್ಚರಿಕೆ
ಪುರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲ ಮಳಿಗೆಗಳನ್ನು ಪೂರ್ಣ ತೆರವುಗೊಳಿಸಲು ತೀರ್ಮಾನಿಸಿ ಸಹಿ ಹಾಕಿದ್ದೇವೆ. ಆದರೆ ಈಗ ಅರ್ಧಂಬರ್ಧ ತೆರವು ಮಾಡಿದರೆ ಹೇಗೆ? ಒಬ್ಬರಿಗೆ ಸುಣ್ಣ, ಒಬ್ಬರಿಗೆ ಬೆಣ್ಣೆ ಎಂಬ ನೀತಿ ಸರಿಯಲ್ಲ. ರಸ್ತೆಗೆ ಹೊಂದಿ ಕೊಂಡ ಎಲ್ಲ ಮಳಿಗೆಗಳನ್ನು ಪೂರ್ಣ ತೆರವುಗೊಳಿಸದಿದ್ದರೆ ಶುಕ್ರವಾರದಿಂದ ಪ್ರತಿಭ ಟನೆ ನಡೆಸಲಾಗುವುದು ಎಂದು ತೆರವು ಪುರಸಭೆ ಮಾಜಿ ಸದಸ್ಯ ಹೊಸಕೇರಿ ಸುರೇಶ್ ಎಚ್ಚರಿಸಿದರು.