ಸಭೆಯ ನಂತರ ಒಗ್ಗಟ್ಟು ಪ್ರದರ್ಶಿಸಿದ ಮುಖಂಡರು ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ, ಬಿ.ಎಂ. ಸತೀಶ್ ಕೊಳೇನಹಳ್ಳಿ, ಶಾಮನೂರು ಲಿಂಗರಾಜು, ಬಸವರಾಜನಾಯ್ಕ, ಚಂದ್ರಶೇಖರ ಪೂಜಾರ್, ಲೋಕಿಕೆರೆ ನಾಗರಾಜ ಮತ್ತಿತರರು ಇದ್ದರು. Farmers' Meeting
ದಾವಣಗೆರೆ

ಭದ್ರಾ ಬಣ ಬಡಿದಾಟ ಬಂದ್

ರವೀಂದ್ರನಾಥ್, ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ

ದಾವಣಗೆರೆ: ಭದ್ರಾ ಅಚ್ಚಕಟ್ಟು ರೈತರ ಹಿತರಕ್ಷಣೆ ವಿಚಾರದಲ್ಲಿ ಇದುವರೆಗೆ ಪ್ರತ್ಯೇಕ ನಿಲುವು ಮತ್ತು ಹೋರಾಟ ರೂಪಿಸುತ್ತಿದ್ದ ಭಾರತೀಯ ರೈತ ಒಕ್ಕೂಟ ಮತ್ತು ಜಿಲ್ಲಾ ರೈತರ ಒಕ್ಕೂಟಗಳು ಇನ್ನು ಮುಂದೆ ಒಟ್ಟಾಗಿ ಹೋರಾಟ ಮಾಡಲು ನಿರ್ಧರಿಸಿವೆ.

ಭಾರತೀಯ ರೈತ ಒಕ್ಕೂಟ ಮತ್ತು ಜಿಲ್ಲಾ ರೈತರ ಒಕ್ಕೂಟ ಎರಡೂ ರೈತ ಸಂಘಟನೆಗಳು ಬಿಜೆಪಿ ಮುಖಂಡರ ಹಿಡಿತದಲ್ಲೇ ಇವೆ. ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಭದ್ರಾ ನೀರಿನ ವಿಚಾರದಲ್ಲಿ ಭಿನ್ನ ನಿಲುವಿಗೆ ಬಂದು ಪ್ರತ್ಯೇಕ ಹೋರಾಟಗಳು ನಡೆದಿದ್ದವು.

ಪ್ರತ್ಯೇಕ ಹೋರಾಟದಿಂದ ಅಚ್ಚುಕಟ್ಟು ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ, ಹಾಗೂ ಪ್ರತ್ಯೇಕ ನಿಲುವು ಸರ್ಕಾರಕ್ಕೆ ಅಡ್ವಾಂಟೇಜ್ ಆಗಲಿದ್ದು, ಇದರಿಂದ ಅಚ್ಚುಕಟ್ಟು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಹೀಗಾಗಿ ಇನ್ನು ಮುಂದೆ ಒಂದೇ ನಿಲುವು ತೆಗೆದುಕೊಳ್ಳಬೇಕು, ಒಟ್ಟಾಗಿ ಹೋರಾಟ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ನಡೆದ ಎರಡೂ ಬಣಗಳ ಸಭೆಯಲ್ಲಿ ಈ ತೀರ್ಮಾನ ತೆಗದುಕೊಳ್ಳಲಾಗಿದೆ.

ಇದುವರೆಗೆ ಆಗಿರುವ ಘಟನೆ ಮತ್ತು ಈ ಬೆಳವಣಿಗೆಗಳಿಂದ ಅಚ್ಚುಕಟ್ಟು ರೈತರಿಗೆ ಆಗಿರುವ ಅನನುಕೂಲ ಮತ್ತು ದುಷ್ಪರಿಣಾಮಗಳ ಚರ್ಚೆ ಬೇಡ, ಪೋಸ್ಟ್ ಮಾರ್ಟಂ ಮಾಡುವ ಪ್ರಯತ್ನ ಮಣ್ಣಿನ ಗೋಡೆಯನ್ನು ತೊಳೆದಂತಾಗಲಿದೆ. ಮಣ್ಣಿನ ಗೋಡೆ ತೊಳೆಯುವ ಉದ್ದೇಶ ಈಡೇರುವುದಿಲ್ಲ. ಮಣ್ಣಿನ ಗೋಡೆಗೆ ಎಷ್ಟೇ ನೀರು ಹಾಕಿದರೂ ಕೆಸರು ನೀರು ಬರುತ್ತದೆಯೇ ಹೊರತು ಗೋಡೆ ಸ್ವಚ್ಛ ಆಗದು. ಹೀಗಾಗಿ ಹಿಂದಿನ ಚರ್ಚೆ ಬೇಡ, ಮುಂದೆ ಸಾಗಬೇಕಾದ ಮಾರ್ಗದ ಬಗ್ಗೆ ಮಾತ್ರ ಚರ್ಚೆ ಮಾಡೋಣ ಎಂದು ಹಿರಿಯರು ಕಡ್ಡಿ ಮುರಿದಂತೆ ಹೇಳಿದ್ದರಿಂದ ಹಳೆಯ ವಿಚಾರಗಳನ್ನು ಕೆದಕಲು ಅವಕಾಶವಾಗಲಿಲ್ಲ ಎನ್ನಲಾಗಿದೆ.

ಭತ್ತ - ಅಡಿಕೆ

ಒಂದು ಹಂತದಲ್ಲಿ ಭದ್ರಾ ರೈತರ ಹೋರಾಟ ಭತ್ತದ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ನಡುವಿನ ಸಂಘರ್ಷದ ಸ್ವರೂಪ ಪಡೆದುಕೊಂಡಿತ್ತು. ಮುಂಗಾರು ಬೆಳೆಗೆ ನೀರು ಬೇಕು ಎನ್ನುವ ಹೋರಾಟ ಭತ್ತ ಬೆಳೆಗಾರರದ್ದು, ಮುಂಗಾರಿಗೆ ಬೇಡ, ಬೇಸಿಗೆ ಬೆಳೆಗೆ ನೀರು ಕೊಡಿ ಎನ್ನುವ ಹೋರಾಟ ಅಡಿಕೆ ಬೆಳೆಗಾರರದ್ದು ಎನ್ನುವ ಹಂತಕ್ಕೆ ಹೋಗಿತ್ತು. ಪಕ್ಷಾತೀತ ಹೋರಾಟ ಎಂದು ಬಿಂಬಿಸಿಕೊಂಡಿದ್ದರೂ ಎರಡೂ ಹೋರಾಟಗಳ ಹಿಂದೆ ಬಿಜೆಪಿಯ ಮುಖಂಡರದ್ದೇ ನೇತೃತ್ವ ಇತ್ತು. ಎರಡೂ ಗುಂಪುಗಳ ನಡುವೆ ಗುರುತಿಸಿಕೊಂಡಿದ್ದ ಕೆಲವರಿಗೆ ಇದು ಸಮಸ್ಯೆಯಾಗಿತ್ತು. ಯಾವ ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕು ಎಂಬ ಇಕ್ಕಟ್ಟಿನ ಸ್ಥಿತಿಯಲ್ಲಿ ಇದ್ದರು.

ಮುಂಗಾರು ಬೆಳೆ ವಿಚಾರದಲ್ಲೇ ಮೂಡದ ಒಮ್ಮತ

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮುಂಗಾರು ಭತ್ತದ ಬೆಳೆಗೆ ನೀರು ಕೊಡಬೇಕೇ? ಬೇಡವೇ ಎನ್ನುವ ವಿಚಾರದಲ್ಲಿ ಬಣ ಸಂಘರ್ಷ ಆರಂಭವಾಯಿತು. ಕೆಲವರು ಮುಂಗಾರು ಬೆಳೆಗೆ ನೀರು ಕೊಡಬೇಕು ಎಂಬ ವಾದ ಮಂಡಿಸಿದರೆ ಮತ್ತೆ ಕೆಲವರು ಈಗಾಗಲೇ ಮುಂಗಾರು ಭತ್ತ ನಾಟಿ ಸಮಯ ಮುಗಿದಿದೆ. ಈಗ ನೀರು ಕೊಟ್ಟರೂ ಇಳುವರಿ ಬರುವುದಿಲ್ಲ, ರೋಗ ಸಂಭವ ಹೆಚ್ಚು. ಮುಂಗಾರು ಬೆಳೆಗೆ ನೀರು ಕೊಟ್ಟರೆ ಬೇಸಿಗೆ ಬೆಳೆಗೆ ನೀರು ಸಿಗುವ ಸಾಧ್ಯತೆಯೂ ಕಡಿಮೆ. ಕುಡಿಯುವ ನೀರಿಗೂ ಸಮಸ್ಯೆಯಾಗಬಹುದು. ಹೀಗಾಗಿ ಮುಂಗಾರು ಬೆಳೆಗೆ ಬೇಡ, ಬೇಸಿಗೆ ಬೆಳೆಗೆ 120 ದಿನ ನೀರು ಕೊಡಬೇಕು ಎಂದು ಆಗ್ರಹಪಡಿಸಿದ್ದರು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಕರೆದಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಮುಖಂಡರಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಮುಂಗಾರು ಬೆಳೆಗೆ ನಾಲೆಗಳಿಗೆ ನೀರು ಹರಿಸಬೇಕೇ? ಅಥವಾ ಬೇಸಿಗೆ ಬೆಳೆಗೆ ನೀರು ಕೊಡಬೇಕೆ? ಎಂಬ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ರೈತ ಮುಖಂಡರಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ಸರ್ಕಾರಕ್ಕೆ ವರವಾಗಿ ಪರಿಣಮಿಸಿತು. ಹೀಗಾಗಿ ಸಭೆಯ ನೇತೃತ್ವ ವಹಿಸಿದ್ದ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಮಧು ಬಂಗಾರಪ್ಪ ಅವರು ನೀರು ಹರಿಸಬೇಕೇ? ಬೇಡವೇ? ಎಂಬ ತೀರ್ಮಾನ ತೆಗೆದುಕೊಳ್ಳುವ ಹೊಣೆಯನ್ನು ಮುಖ್ಯಮಂತ್ರಿಗಳಿಗೆ ಬಿಡುವ ನಿರ್ಧಾರ ಕೈಗೊಂಡು ಸಭೆಯನ್ನು ಬರಕಾಸ್ತು ಮಾಡಿದ್ದರು. ಭದ್ರಾ ಅಚ್ಚುಕಟ್ಟು ರೈತರಿಗೆ ಮೊದಲ ಹಿನ್ನಡೆ ಆಗಿದ್ದು ಈ ಸಭೆಯಲ್ಲೇ. ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಸರ್ಕಾರದ ವಿಳಂಬ ನೀತಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು. ಮುಂಗಾರು ಭತ್ತದ ಬೆಳೆಗೆ ನೀರು ಕೊಡುವುದಿಲ್ಲ ಎಂಬುದನ್ನು ವಿಳಂಬ ನೀತಿಯ ಮೂಲಕ ಸ್ಪಷ್ಟಪಡಿಸಲಾಗಿತ್ತು.

ಸಂಧಾನದ ಸಭೆಯಾದ ಹೋರಾಟದ ಸಭೆ

ಭದ್ರಾ ರೈತರ ಹಿತರಕ್ಷಣೆಗಾಗಿ ಯಾವ ರೀತಿಯ ಹೋರಾಟ ರೂಪಿಸಬೇಕು ಎಂದು ಶುಕ್ರವಾರ ಕರೆಯಲಾಗಿದ್ದ ಸಭೆ ಸಂಧಾನ ಸಭೆಯಾಗಿ ಮಾರ್ಪಟ್ಟಿತ್ತು. ಭಾರತೀಯ ರೈತ ಒಕ್ಕೂಟದ ಮುಖಂಡರು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಮನೆಯಲ್ಲಿ ಸಭೆ ನಡೆಸಿದರೆ ಮತ್ತೊಂದು ಗುಂಪು ಎಂ.ಪಿ.ರೇಣುಕಾಚಾರ್ಯ ಅವರ ಸಮ್ಮುಖದಲ್ಲಿ ಸರ್ಕಿಟ್ ಹೌಸ್‌ನಲ್ಲಿ ಸಭೆ ನಡೆಸಿತು. ನಂತರ ರವೀಂದ್ರನಾಥ್ ಅವರು ತಮ್ಮ ಮನೆಗೆ ಬಂದಿದ್ದ ಮುಖಂಡರೊಂದಿಗೆ ಸರ್ಕಿಟ್ ಹೌಸ್‌ಗೆ ಆಗಮಿಸಿದರು. ರವೀಂದ್ರನಾಥ್ ಮತ್ತು ರೇಣುಕಾಚಾರ್ಯ ಅವರು ಎರಡೂ ಬಣಗಳ ಮುಖಂಡರಿಗೆ ಕಿವಿಮಾತು ಹೇಳಿ ಒಟ್ಟಾಗಿ ಹೋಗಲು ಸೂಚನೆ ನೀಡಿದರು. ಇನ್ನು ಮುಂದೆ ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣೆಗಾಗಿ ಒಂದೇ ನಿಲುವು ಮತ್ತು ಒಂದೇ ತಂಡವಾಗಿ ಹೋರಾಟ ಮಾಡಬೇಕು ಎಂಬ ತೀರ್ಮಾನ ಮಾಡಲಾಯಿತು.

3 ಟಿಎಂಸಿ ನೀರು ಕೊಟ್ಟಾಗಲೂ ಒಟ್ಟಾಗಲಿಲ್ಲ

ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಪರೀಕ್ಷೆಗಾಗಿ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ನೀರು ಹರಿಸಿದಾಗಲೂ ಅಚ್ಚುಕಟ್ಟು ಭಾಗದಲ್ಲಿ ಒಗ್ಗಟ್ಟು ಕಾಣಲಿಲ್ಲ. 3 ಟಿಎಂಸಿ ನೀರು ಕೊಡುವುದನ್ನು ವಿರೋಧ ಮಾಡಿದರೇ ಹೊರತು ತುಂಗಾ ಮೇಲ್ದಂಡೆ ಯೋಜನೆಯಿಂದ ಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಲಿಫ್ಟ್ ಮಾಡುವ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಾದ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಎಂದು ಒತ್ತಡ ತರುವ ಅವಕಾಶವನ್ನು ಕಳೆದುಕೊಂಡರು. ಅಪೂರ್ಣ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ತರಲು ಇದು ಸರಿಯಾದ ಸಮಯವಾಗಿತ್ತು. ಕಬ್ಬಿಣ ಕಾದ ಸಮಯದಲ್ಲೇ ಬಡಿದು ಬೇಕಾದ ಆಕಾರ ಮಾಡಿಕೊಳ್ಳುವ ಅವಕಾಶ ಕಳೆದುಕೊಂಡರು. ಹಿರಿಯೂರು ಉಪಚುನಾವಣೆ ಕಾರಣ ಭದ್ರಾಮೇಲ್ದಂಡೆ ಯೋಜನೆಗೆ ಸರ್ಕಾರ ನೀರು ಕೊಡುವುದು ಖಚಿತವಾಗಿತ್ತು. ಆದರೆ ಈ ಅವಕಾಶ ಬಳಕೆ ಮಾಡಿಕೊಳ್ಳಲು ವಿಫಲರಾದರು.